ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ರಾಷ್ಟ್ರೀಯ ಪಂಚಾಯತ್ ಪುರಸ್ಕಾರ 2024ರ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆಯಿತು. ಉಡುಪಿ ಜಿಲ್ಲಾ ಪಂಚಾಯಿತಿಗೆ ಈ ಬಾರಿಯ ‘ನಾನಾಜಿ ದೇಶ್‌ಮುಖ್ ಸರ್ವೋತ್ತಮ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ್’ ಪ್ರಶಸ್ತಿ ಲಭಿಸಿದೆ.ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿ ಹಾಗೂ 2 ಕೋಟಿ ರುಪಾಯಿ ಮೊತ್ತದ ಚೆಕ್ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ಪಂಚಾಯಿತಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ ಶೇ.90ಕ್ಕೂ ಜಾಸ್ತಿ ತೆರಿಗೆ ವಸೂಲು, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನ ಗುಣಮಟ್ಟ ಪರಿಶೀಲನೆ, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಸಾಂಕ್ರಾಮಿಕ ರೋಗಗಳ ಸಮರ್ಥ ನಿರ್ವಹಣೆ, ಶಿಶು, ಗರ್ಭಿಣಿ ಮರಣ ಸಂಭವಿಸದಂತೆ ನಿಗಾ, ಅಪೌಷ್ಟಿಕತೆ ನಿವಾರಣೆ, ಆನ್ಲೈನ್ ತೆರಿಗೆ ಪಾವತಿಗೆ ಕ್ರಮ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಕೋಚಿಂಗ್ ಮೂಲಕ ಎಸ್ಸೆಸ್ಸೆಲ್ಸಿ - ಪಿಯುಸಿಯಲ್ಲಿ ಅಗ್ರಸ್ಥಾನ, ತ್ಯಾಜ್ಯ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿ, ಸಂಜೀವಿನಿ ಸಂಘಗಳ ಮೂಲಕ ಹಡಿಲು ಭೂಮಿ ಕೃಷಿ, ಗ್ರಾಮೀಣ ಭಾಗದಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ, ಸೇರಿದಂತೆ ಮತ್ತಿತರ ಉತ್ತಮ ಕಾರ್ಯಗಳಿಂದ ಈ ಪ್ರಶಸ್ತಿ ಸಂದಿದೆ.