ಡಿ. 21 ರಿಂದ 23ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ತೋಟಗಾರಿಕೆ ಮೇಳಕ್ಕೆ ಉದ್ಯಾನಗಿರಿಯನ್ನು ಸಜ್ಜುಗೊಳಿಸಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಿ. 21 ರಿಂದ 23ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ತೋಟಗಾರಿಕೆ ಮೇಳಕ್ಕೆ ಉದ್ಯಾನಗಿರಿಯನ್ನು ಸಜ್ಜುಗೊಳಿಸಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋವಿವಿಯ ಆವರಣದ ದಾಳಿಂಬೆ ತಾಕಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಮೇಳದ ಮೊದಲ ದಿನ ಉದ್ಘಾಟನೆ ಹಾಗೂ ಫಲಶ್ರೇಷ್ಠ ರೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ತರಗಿ-ಇಳಕಲ್ಲ ವಿಜಯ ಮಹಾಂತೇಶ ಸಂಸ್ಥಾನದ ಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸುವರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮೇಳಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಿ.22ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿಯ ಸಿದ್ಧಸಂಸ್ಥಾನಮಠದ ಡಾ.ಪಂಚಮ ಶಿವಲಿಂಗೇಶ್ವರ ಶ್ರೀಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜವಳಿ, ಸಹಕಾರ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭಾಗವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮೂರನೇ ದಿನ ನಡೆಯುವ ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಇತರೆ ಗಣ್ಯರು ಆಗಮಿಸಲಿದ್ದಾರೆಂದು ತಿಳಿಸಿದರು.

ಮೇಳದಲ್ಲಿ ನುರಿತ ವಿಜ್ಞಾನಿಗಳಿಂದ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಗಳ ಮಾಹಿತಿ ನೀಡಲಾಗುತ್ತದೆ. ದಾಳಿಂಬೆ, ದ್ರಾಕ್ಷಿ ಬೆಳೆಗಳ ನಿರ್ವಹಣೆ, ಉತ್ಪಾದನಾ ತಾಂತ್ರಿಕತೆ, ಉತ್ಪಾದನೆಗೆ ಪೂರಕವಾದ ಪರಿಕರಗಳ ಪ್ರದರ್ಶನ ನಡೆಯಲಿದೆ. ಖಾಸಗಿ ಕಂಪನಿಗಳು ಸಹ ತಾಂತ್ರಿಕತೆಯ ಉತ್ಪನ್ನಗಳು, ಪ್ರೊಡಕ್ಟ್‌ ಗಳನ್ನು ಪ್ರದರ್ಶನ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಂಟಿ ಕೃಷಿ ನಿರ್ದೇಕ ರುದ್ರೇಶ, ತೋವಿವಿಯ ವಿಸ್ತರಣಾ ನಿರ್ದೇಶಕ ಹಾಗೂ ಮೇಳದ ಅಧ್ಯಕ್ಷ ಡಾ.ವೆಂಕಟೇಶಲು, ಸಂಶೋಧನಾ ನಿರ್ದೇಶಕ ಹಾಗೂ ಮೇಳದ ಉಪಾದ್ಯಕ್ಷ ಫಕ್ರುದ್ದಿನ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.