ಸಡಗರ ಸಂಭ್ರಮದಿಂದ ಹಿಂದೂ ಸಂಪ್ರದಾಯದ ಹೊಸ ವರ್ಷ ದಿನವಾದ ಯುಗಾದಿ ಹಬ್ಬ ಸಂಭ್ರಮದಿಂದ ಆಚರಣೆ

| N/A | Published : Apr 01 2025, 12:48 AM IST / Updated: Apr 01 2025, 09:35 AM IST

Ugadi foods
ಸಡಗರ ಸಂಭ್ರಮದಿಂದ ಹಿಂದೂ ಸಂಪ್ರದಾಯದ ಹೊಸ ವರ್ಷ ದಿನವಾದ ಯುಗಾದಿ ಹಬ್ಬ ಸಂಭ್ರಮದಿಂದ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಸಂಪ್ರದಾಯದ ಹೊಸ ವರ್ಷದ ದಿನವಾದ ಯುಗಾದಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಭಾನುವಾರ ಸಂಜೆ ಸುರಿದ ಮಳೆಯು ಯುಗಾದಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿತ್ತು

 ಹುಬ್ಬಳ್ಳಿ : ಹಿಂದೂ ಸಂಪ್ರದಾಯದ ಹೊಸ ವರ್ಷದ ದಿನವಾದ ಯುಗಾದಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಭಾನುವಾರ ಸಂಜೆ ಸುರಿದ ಮಳೆಯು ಯುಗಾದಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿತ್ತು.ಹಬ್ಬದ ಹಿನ್ನೆಲೆಯಲ್ಲಿ ಜನರು ಎಣ್ಣೆ ಸ್ನಾನಾದಿ ಪೂರೈಸಿ, ದೇವರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬೇವು-ಬೆಲ್ಲ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.

 ಹೊಸ ಬಟ್ಟೆ ಧರಿಸಿ ದೇವಸ್ಥಾನ, ಮಠಗಳಿಗೆ ತೆರಳಿ ಪೂಜಾಭಿಷೇಕ ಸಲ್ಲಿಸಿದರು. ಮಹಿಳೆಯರು ದುರ್ಗವ್ವ, ದ್ಯಾಮವ್ವ ಮುಂತಾದ ದೇವಿಯರ ದೇಗುಲಗಳಿಗೆ ತೆರಳಿ ಉಡಿ ತುಂಬಿದರು.ಶುಭ ಸೂಚಕ ಸಮಯ ಎಂದು ಹೇಳಲಾಗುವ ಯುಗಾದಿ ದಿನದಂದು ಶುಭ ಕಾರ್ಯಗಳನ್ನು ಕೈಗೊಂಡು ವರ್ಷದ ಕಾರ್ಯಗಳಿಗೆ ಮುನ್ನುಡಿ ಬರೆದರು. ಹೊಸ ಹೊಸ ವಸ್ತು, ಟ್ರ್ಯಾಕ್ಟರ್‌, ದ್ವಿಚಕ್ರ ವಾಹನ, ಕಾರು ಇತ್ಯಾದಿಗಳನ್ನು ಜನರು ಮುಂಗಡ ಬುಕಿಂಗ್‌ ಮಾಡಿಟ್ಟಿದ್ದು, ಯುಗಾದಿಯಂದು ಖರೀದಿಸಿದರು.

ಸಿದ್ಧಾರೂಢಮಠ, ಮೂರು ಸಾವಿರಮಠ, ಸಾಯಿ ಬಾಬಾ ಮಂದಿರ, ತುಳಜಾಭವಾನಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಿಗೆ ಜನರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಹೊಲಗಳಿಗೆ ತೆರಳಿ ಭೂದೇವಿಗೆ ಪೂಜೆ ಸಲ್ಲಿಸಿ ಪ್ರಸಕ್ತ ವರ್ಷ ಉತ್ತಮ ಮಳೆ, ಬೆಳೆ ನೀಡಲಿ ಎಂದು ಬೇಡಿಕೊಂಡರು. ಗ್ರಾಮದ ಅಕ್ಕಪಕ್ಕದ ಮನೆಗೆ ಭೇಟಿ ನೀಡಿ ಸ್ನೇಹಿತರು ಹಾಗೂ ಸಂಬಂಽಕರಿಗೆ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಹಬ್ಬಕ್ಕೆ ರುಚಿ ಕರವಾದ ಅಡುಗೆ ಮಾಡಿ ಸಹ ಪರಿವಾರದೊಂದಿಗೆ ಕುಳಿತು ಹಬ್ಬದ ಊಟ ಸವಿದರು.

ಮಳೆಯ ಸಿಂಚನ: ಯುಗಾದಿ ಹಬ್ಬದ ಮೂಡ್‌ನಲ್ಲಿದ್ದ ಮಹಾನಗರ ಜನರಿಗೆ ವರುಣ ದರ್ಶನ ನೀಡಿ ಸಂಭ್ರಮ ಹೆಚ್ಚಿಸಿದನು. ಬೆಳಿಗ್ಗೆ, ಮಧ್ಯಾಹ್ನದವರೆಗೂ ಬಿರು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಸಂಜೆ ಸುರಿದ ಮಳೆ ತಂಪನ್ನೆರೆಯಿತು. ವರ್ಷದ ಮೊದಲ ದಿನವೇ ಭಾರಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯಿತು. ರಸ್ತೆಗಳು ತುಂಬಿ ಹರಿದವು. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಇತ್ತ ವಿದ್ಯುತ್‌ ಕಣ್ಣಾಮುಚ್ಚಾಲೆ ಜನರನ್ನು ಕಂಗೆಡಿಸಿತ್ತು. ಕೆಲವೆಡೆ ಮರಗಳು ಧರೆಗೆ ಉರುಳಿ ರಸ್ತೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದವು.