ಯುಗಾದಿ ಹಬ್ಬವು ಪ್ರಕೃತಿಯೊಂದಿಗೆ ಹತ್ತಿರದ ಸಂಬಂಧ ಹೊಂದಿದೆ. ಈ ಸಮಯದಲ್ಲಿ ಮರಗಳು ಹೊಸ ಎಲೆಗಳನ್ನು ಬಿಡುತ್ತವೆ. ಹೂವುಗಳು ಅರಳುತ್ತವೆ.
ಬಳ್ಳಾರಿ: ಯುಗಾದಿ ಕೇವಲ ಕಾಲದ ಬದಲಾವಣೆಯ ಸಂಕೇತವಲ್ಲ. ಹೊಸ ಆಸೆಗಳು, ಕನಸುಗಳು ಮತ್ತು ಜೀವನದ ಹೊಸ ಹಾದಿಯ ಆರಂಭವೂ ಆಗಿದೆ ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಹಾಗೂ ಸಂಸ್ಕಾರ ಭಾರತಿ ಮಹಾನಗರ ಘಟಕ ಸಹಯೋಗದಲ್ಲಿ ಬ್ಯಾಂಕರ್ಸ್ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯುಗಾದಿ ಹಬ್ಬವು ಪ್ರಕೃತಿಯೊಂದಿಗೆ ಹತ್ತಿರದ ಸಂಬಂಧ ಹೊಂದಿದೆ. ಈ ಸಮಯದಲ್ಲಿ ಮರಗಳು ಹೊಸ ಎಲೆಗಳನ್ನು ಬಿಡುತ್ತವೆ. ಹೂವುಗಳು ಅರಳುತ್ತವೆ. ಇದು ಪ್ರಕೃತಿಯ ಹೊಸ ಚೈತನ್ಯದ ಸಂಕೇತವಾಗಿದೆ. ಮನುಷ್ಯನೂ ತನ್ನ ಜೀವನದಲ್ಲಿ ಹೊಸ ಉತ್ಸಾಹವನ್ನು ತುಂಬಿಕೊಳ್ಳಬೇಕೆಂಬ ಸಂದೇಶವನ್ನು ಇದು ನೀಡುತ್ತದೆ. ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಜೀವನದಲ್ಲಿ ಹೊಸ ದಾರಿಯನ್ನು ಹಿಡಿಯುವ ಸಮಯವೂ ಹೌದು. ಹಳೆಯ ದೋಷಗಳನ್ನು ಮರೆತು, ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವ ದಿನ ಇದಾಗಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಸಂತೋಷದಿಂದ ಬದುಕಲು ಈ ಹಬ್ಬ ನಮಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದ ಜೋಳದರಾಶಿ ಬಸವರಾಜ ಸ್ವಾಮಿ ಮಾತನಾಡಿ, ಯುಗಾದಿ ಬರೀ ಸಂಭ್ರಮದ ಹಬ್ಬವನ್ನು ಸಹಬಾಳ್ವೆ, ಸಮಾನತೆ ಹಾಗೂ ಸೌಹಾರ್ದ ಬಿತ್ತುವ ವಿಶೇಷ ಹಬ್ಬವಾಗಿದೆ ಎಂದು ಹೇಳಿದರು. ಸಂಸ್ಕಾರ ಭಾರತಿ ಸಂಸ್ಥೆಯ ಬಳ್ಳಾರಿ ಘಟಕ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹಂದಿಹಾಳು, ಹಿರಿಯ ರಂಗ ನಿರ್ದೇಶಕ ಶಿವೇಶ್ವರಗೌಡ ಕಲ್ಲುಕಂಬ ಅವರನ್ನು ಸನ್ಮಾನಿಸಲಾಯಿತು. ಯುಗಾದಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಜಶೇಖರ ಕುರಿಹಟ್ಟಿ, ಹಿರಿಯ ನಾಗರಿಕ ವೇದಿಕೆಯ ಎರ್ರೆಪ್ಪ, ಮಂಜುನಾಥ ಸ್ವಾಮಿ, ರಂಗಭೂಮಿ ಕಲಾವಿದ ಮುದ್ದಟನೂರು ಎಚ್. ತಿಪ್ಪೇಸ್ವಾಮಿ, ತೊಗೊಲಗೊಂಬೆ ಕಲಾವಿದ ಸುಬ್ಬಣ್ಣ ಹಾಗೂ ಸಂಗೀತ ಕಲಾವಿದ ವೀರೇಶ್ ದಳವಾಯಿ ಉಪಸ್ಥಿತರಿದ್ದರು.ಜಡೇಶ್ ಎಮ್ಮಿಗನೂರು ಅವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಬಳಿಕ ಸಿರಿಗೇರಿಯ ಧಾತ್ರಿ ರಂಗಸಂಸ್ಥೆ ಅವರಿಂದ ಶ್ರೀಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶನಗೊಂಡಿತು. ಗೌರಿ ಕಾರ್ಯಕ್ರಮ ನಿರ್ವಹಿಸಿದರು.