ಯುಗಾದಿ ಪಾಡ್ಯಕ್ಕೆ ಭೂಮಿ ಪೂಜಿಸಿ ಕೃಷಿ ಚಟುವಟಿಕೆಗೆ ಚಾಲನೆ

| Published : Apr 01 2025, 12:50 AM IST

ಸಾರಾಂಶ

ಯುಗಾದಿ ಹಬ್ಬವು ರೈತರ ಪಾಲಿಗೆ ಅತ್ಯಂತ ಮಹತ್ವದ ದಿನ. ವರ್ಷದ ಆರಂಭದ ದಿನದಂದು ರೈತರು ಭೂತಾಯಿಯನ್ನು ಹಸನುಗೊಳಿಸಲು ಆರಂಭಿಸುವ ಕಾರ್ಯಕ್ಕೆ ಅನುವಾಗುತ್ತಾರೆ.

ಲಕ್ಷ್ಮೇಶ್ವರ: ಯುಗಾದಿ ಹಬ್ಬವು ರೈತರ ಪಾಲಿಗೆ ಅತ್ಯಂತ ಮಹತ್ವದ ದಿನ. ವರ್ಷದ ಆರಂಭದ ದಿನದಂದು ರೈತರು ಭೂತಾಯಿಯನ್ನು ಹಸನುಗೊಳಿಸಲು ಆರಂಭಿಸುವ ಕಾರ್ಯಕ್ಕೆ ಅನುವಾಗುತ್ತಾರೆ.

ಯುಗಾದಿ ಅಮಾವಾಸ್ಯೆ ಮಾರನೆ ದಿನ ಯುಗಾದಿ ಪಾಡ್ಯ ಅಂದರೆ ಹಿಂದುಗಳ ಪಾಲಿನ ಹೊಸ ವರ್ಷ ಅದಕ್ಕಾಗಿ ರೈತರು ವರ್ಷದ ಅರಂಭದಲ್ಲಿ ಭೂತಾಯಿಯ ಒಡಲಲ್ಲಿ ಬೆಳೆದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ ಮಾಗಿ ಹಂಗಾಮಿನ ಉಳುಮೆ ಆರಂಭಿಸುವ ಪವಿತ್ರ ದಿನವಾಗಿ ರೈತರು ಸಂಭ್ರಮಿಸುತ್ತಾರೆ.

ಯುಗಾದಿಯ ದಿನದಂದು ರೈತರು ಸೂರ್ಯೋದಯಕ್ಕೆ ಮೊದಲು ಎದ್ದು ತಮ್ಮ ಎತ್ತುಗಳಿಗೆ ಝೂಲ ಹೊದಿಸಿ ಕೊಡುಗಳನ್ನು ಅಲಂಕರಿಸಿ ಎತ್ತುಗಳ ಹೆಗಲಿಗೆ ನೊಗ ಹೂಡಿ ಹೊಲಕ್ಕೆ ಹೋಗಿ ಭೂತಾಯಿಯನ್ನು ಪೂಜಿಸಿ ಭೂಮಿಯನ್ನು ಹದಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆ.

ರೈತರು ಹೊಲಕ್ಕೆ ಹೋಗಿ ಕುಂಟಿ ಹೂಡಿ ಭೂಮಿಯನ್ನು ಹರಗಿ ಸ್ವಚ್ಛಗೊಳಿಸಿ ವರ್ಷದ ಮೊದಲ ಕಾರ್ಯವನ್ನು ಅತ್ಯಂತ ಸಂಭ್ರಮದಿಂದ ಅನಾದಿ ಕಾಲದಿಂದ ಆಚರಿಸುತ್ತಾ ಬರುತ್ತಿದ್ದಾರೆ. ಯುಗಾದಿನ ನಂತರ ಹೊಸ ಮಳೆಗಾಲ ಆರಂಭವಾಗುವುದರಿಂದ ಅಷ್ಟರಲ್ಲಿ ಭೂಮಿಯನ್ನು ಹದಗೊಳಿಸಿ ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವ ಕಾರ್ಯ ಮಾಡುತ್ತಾರೆ. ಯುಗಾದಿ ಹಬ್ಬವು ಹಿಂದೂಗಳ ಪಾಲಿಗೆ ಹೊಸ ವರ್ಷವಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ರೈತರು ಎತ್ತುಗಳಿಗೆ ನೊಗ ಹೂಡಿ ಹರಗುವ ಕಾರ್ಯದಲ್ಲಿ ತೊಡಗಿರುವ ದೃಶ್ಯ ಬಹುತೇಕ ಹೊಲಗಳಲ್ಲಿ ಕಂಡು ಬಂದಿತು.