ಯುಜಿಸಿ ಅನುಮತಿ: ಬಿಐಇಟಿ ಕಾಲೇಜು ಇನ್ಮುಂದೆ ಸ್ವಾಯತ್ತ ಸಂಸ್ಥೆ

| Published : May 18 2024, 12:39 AM IST

ಸಾರಾಂಶ

ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ 2024- 2025ನೇ ಶೈಕ್ಷಣಿಕ ಸಾಲಿನಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಅನುಮತಿ ದೊರೆತಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ ಹೇಳಿದ್ದಾರೆ.

- ಪರೀಕ್ಷೆ ನಡೆಸುವ ಬಗ್ಗೆ ಕಾಲೇಜಿಗೆ ಸಂಪೂರ್ಣ ನಿಯಂತ್ರಣ: ಪ್ರಾಚಾರ್ಯ ಡಾ.ಅರವಿಂದ ಮಾಹಿತಿ - - - - ಬೆಳಗಾವಿ ವಿಟಿಯು ಮುಖಾಂತರ ನವದೆಹಲಿಯ ಯುಜಿಸಿಗೆ 3.3.2023ರಂದು ಮನವಿ ಸಲ್ಲಿಸಲಾಗಿತ್ತು - ಸಂಯೋಜಿತ ಕಾಲೇಜು ಆಗಿ 26 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಬಿಐಇಟಿ ಕಾಲೇಜು

- 20.1.2024ರಂದು ಬಿಐಇಟಿ ಕಾಲೇಜಿಗೆ ಭೇಟಿ ನೀಡಿ ಎಲ್ಲ ರೀತಿ ಪರಿಶೀಲನೆ ನಡೆಸಿದ್ದ ಯುಜಿಸಿ ತಂಡ

- ಅನುಮೋದನೆ ಸಿಕ್ಕ ಕಾರಣ ಪಠ್ಯಕ್ರಮದಲ್ಲಿ ಬಿಐಇಟಿ ಕಾಲೇಜಿಗೆ ಶೇ.30ರಷ್ಟು ರಿಯಾಯಿತಿ ಇರುತ್ತದೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ 2024- 2025ನೇ ಶೈಕ್ಷಣಿಕ ಸಾಲಿನಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಅನುಮತಿ ದೊರೆತಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಸಂಯೋಜಿತ ಕಾಲೇಜು ಆಗಿ 26 ವರ್ಷದಿಂದ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಬೆಳಗಾವಿಯ ವಿಟಿಯು ಮುಖಾಂತರ ನವದೆಹಲಿಯ ಯುಜಿಸಿಗೆ 3.3.2023ರಂದು ಮನವಿ ಸಲ್ಲಿಸಲಾಗಿತ್ತು ಎಂದರು.

ಮನವಿಗೆ ಪ್ರತಿಯಾಗಿ ತಜ್ಞರ ತಂಡವು ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಸಮಿತಿ ಶಿಫಾರಸಿನ ಮೇರೆಗೆ ವಿಟಿಯು ಅರ್ಜಿಯನ್ನು ಯುಜಿಸಿಗೆ ರವಾನಿಸಿತ್ತು. ಯುಜಿಸಿ ತಂಡವು 20.1.2024ರಂದು ಕಾಲೇಜಿಗೆ ಭೇಟಿ ನೀಡಿ, ಎಲ್ಲ ರೀತಿ ಪರಿಶೀಲನೆ ನಡೆಸಿ, 10 ವರ್ಷದವರೆಗೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅನುಮೋದನೆ ನೀಡಿದೆ. ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅನುಮೋದನೆ ಸಿಕ್ಕ ಕಾರಣ ಪಠ್ಯಕ್ರಮದಲ್ಲಿ ಕಾಲೇಜಿಗೆ ಶೇ.30ರಷ್ಟು ರಿಯಾಯಿತಿ ಇರುತ್ತದೆ ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಗುಣವಾದ ಪಠ್ಯ ಸೇರ್ಪಡೆಗೊಳಿಸಲು ಕಾಲೇಜಿಗೆ ಅವಕಾಶ ಇದೆ. ಪರೀಕ್ಷೆ ನಡೆಸುವುದರ ಮೇಲೆ ಸಂಪೂರ್ಣ ನಿಯಂತ್ರಣ ಕಾಲೇಜಿಗೆ ಇರುತ್ತದೆ. ಇದು ಆದಷ್ಟು ಬೇಗನೆ ಪರೀಕ್ಷೆ ನಡೆಸಿ, ಫಲಿತಾಂಶ ನೀಡಲು ಅನುಕೂಲವಾಗಲಿದೆ. ಸ್ವಾಯತ್ತ ಸಂಸ್ಥೆಯಾದ ನಂತರ ಆಯಾ ವರ್ಷ ಸರ್ಕಾರ ನಿಗದಿಪಡಿಸಿದ ಶುಲ್ಕ ಮತ್ತು ಪ್ರವೇಶ ನಿಯಮ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಬಿಎಂಎಸ್ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಮಾದರಿಯಲ್ಲೇ ದಾವಣಗೆರೆ ಬಿಐಇಟಿ ಕಾಲೇಜು ಸಹ ಪ್ರತಿಷ್ಠಿತ ಸಂಸ್ಥೆಯಾಗಲಿದೆ. ಬಾಪೂಜಿ ಎಂಜಿನಿಯರಿಂಗ್ ಕಾಲೇಜು ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್‌ ಅಭ್ಯಾಸ ಮಾಡಿರುವ 355 ವಿದ್ಯಾರ್ಥಿಗಳಿಗೆ ದೇಶದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ. ಮೇ 25ರಂದು ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಆವಿಷ್ಕಾರ, ಪರಿಕರ, ಸಾಧನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಚ್.ಬಿ. ಅರವಿಂದ ಮಾಹಿತಿ ನೀಡಿದರು.

ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ನಿರ್ಮಲ ಮಾತನಾಡಿ, ತಮ್ಮ ಕಾಲೇಜಿನ ಶೇ.60 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಆಗಿ, ಉದ್ಯೋಗ ಸಿಕ್ಕಿದೆ. ಒಳ್ಳೆಯ ವೇತನ ನೀಡುವ ಕಂಪನಿಗಳು ಕಾಲೇಜಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಜುಲೈ-2024ರಲ್ಲಿ ಮತ್ತೆ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.

ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ಪ್ರೊ. ಜಿ.ಪಿ.ದೇಸಾಯಿ, ಡಾ.ಕರಿಬಸಪ್ಪ, ಕಲ್ಲೇಶಪ್ಪ ಇದ್ದರು.

- - - -17ಕೆಡಿವಿಜಿ1:

ದಾವಣಗೆರೆ ಬಿಐಇಟಿ ಕಾಲೇಜು ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.