ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು: ಕ್ರಮಕ್ಕೆ ಆಗ್ರಹ

| Published : Sep 12 2024, 01:51 AM IST

ಸಾರಾಂಶ

ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು ಹರಿಯುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆ ಹಾಗೂ ನಾಗರೀಕ ಜಾಗೃತಿ ಮತ್ತು ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಿಪಟೂರು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್‌ಗೆ ಬುಧವಾರ ಮನವಿ ಸಲ್ಲಿಸಿದರು.

ಕನ್ನಡ ಪ್ರಭ ವಾರ್ತೆ ತಿಪಟೂರು

ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು ಹರಿಯುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆ ಹಾಗೂ ನಾಗರೀಕ ಜಾಗೃತಿ ಮತ್ತು ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್‌ಗೆ ಬುಧವಾರ ಮನವಿ ಸಲ್ಲಿಸಿದರು. ರೈತ ಮುಖಂಡ ಪ್ರೊ. ಜಯಾನಂದಯ್ಯ ಮಾತನಾಡಿ, ಕಳೆದ ಮೂರ‍್ನಾಲ್ಕು ವರ್ಷಗಳಿಂದಲೂ ನಗರದ ಯುಜಿಡಿ ತ್ಯಾಜ್ಯ ನೀರು ಅಸಮರ್ಪಕ ಹಾಗೂ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಹೇಮಾವತಿ ನಾಲೆಯ ಮೂಲಕ ಈಚನೂರು ಕೆರೆಗೆ ಸೇರ್ಪಡೆಯಾಗುತ್ತಿದೆ. ಈ ಬಗ್ಗೆ ಶಾಸಕರು ಸೇರಿದಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಹೋರಾಟದ ಮೂಲಕ ಎಚ್ಚರಿಕೆ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆ ನೀರನ್ನು ಪ್ರತಿನಿತ್ಯ ನಗರದ ನಾಗರೀಕರು ಬಳಕೆ ಮಾಡುತ್ತಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ ಈಚನೂರು ಸುತ್ತಮುತ್ತಲ ಭಾಗದ ರೈತರ ಬೋರ್‌ವೆಲ್‌ಗಳ ನೀರು ಕಲುಷಿತಗೊಂಡಿದೆ ಎಂದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಹಿರಿಯ ಸದಸ್ಯರೊಂದಿಗೆ ಈಚನೂರು ಕೆರೆ ಬಳಿ ಹೋಗಿ ಸ್ಥಳ ಪರಿಶೀಲನೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತುರ್ತುಕ್ರಮ ವಹಿಸುವುದಾಗಿ ಆಶ್ವಾಸನೆ ನೀಡಿದರು. ನಗರಸಭೆ ಸದಸ್ಯ ಎಂ.ಎಸ್. ಯೋಗೇಶ್ ಮಾತನಾಡಿ, ನಗರದ ನಾಗರೀಕರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಕರ್ತವ್ಯ ನಗರಸಭೆಯದ್ದಾಗಿದೆ. ಕೊಳಚೆ ನೀರನ್ನು ತಡೆದು ನಿಲ್ಲಿಸುವ ಕೆಲಸವನ್ನು ನಗರಸಭೆ ಅತಿ ಶೀಘ್ರದಲ್ಲಿ ಮಾಡಲಿದೆ ಎಂದರು.ರೈತ ಸಂಘದ ಯೋಗೀಶ್ವರಸ್ವಾಮಿ, ಹಿತರಕ್ಷಣಾ ವೇದಿಕೆಯ ರೇಣುಕಾರಾಧ್ಯ, ನಿ.ನೌ.ಸಂ.ಪ್ರ.ಕಾರ್ಯದರ್ಶಿ ಪಿ.ಆರ್. ಗುರುಸ್ವಾಮಿ, ಪರಮೇಶ್ವರ್, ಜಯಣ್ಣ, ಶಂಕರಪ್ಪ, ನಾಗರಾಜು, ರಾಮಚಂದ್ರ, ವಿದ್ಯಾನಂದ್, ಶಿವಶಂಕರ್ ಮತ್ತಿತರರಿದ್ದರು.