ಉಜಿರೆ ಎಸ್‌ಡಿಎಂ ಕಾಲೇಜು ವಾರ್ಷಿಕೋತ್ಸವ, ಸಾಧಕರ ಸನ್ಮಾನ

| Published : Apr 06 2024, 12:49 AM IST

ಸಾರಾಂಶ

ವಿಶೇಷ ಸಾಧನೆಗೈದ ರ್ಯಾಂಕ್ ವಿಜೇತರು, ನಿವೃತ್ತ ಪ್ರಾಧ್ಯಾಪಕರು, ಪಿಎಚ್‌ಡಿ, ಸಂಶೋಧನೆ ಮತ್ತು ವಿಶೇಷ ಸಾಧಕ ಅಧ್ಯಾಪಕರು, ವಿಶೇಷ ಸಾಧಕ ವಿದ್ಯಾರ್ಥಿಗಳು, ಎನ್.ಸಿ.ಸಿ., ಎನ್.ಎಸ್.ಎಸ್. ಮತ್ತು ಕ್ರೀಡಾ ವಿಭಾಗದ ರಾಷ್ಟ್ರಮಟ್ಟದ ಸಾಧಕರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಿಶೇಷ ಸಾಧನೆಗಳ ಸರಮಾಲೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ಆಗ್ರಸ್ಥಾನವಿದೆ. ಮೌಲ್ಯ, ಸಹಬಾಳ್ವೆ ಕಲಿಸುವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಮಂಗಳೂರು ವಿ.ವಿ. ಉಪಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳೀದರು.

ಅವರು ಶನಿವಾರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಶೇಷ ಸಾಧಕರನ್ನು ಸನ್ಮಾನಿಸಿ, ಪತ್ರಿಕೋದ್ಯಮ ವಿಭಾಗದ ‘ಚಿಗುರು’ ಹಸ್ತಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ಜೀವನದ ಮೌಲ್ಯಗಳ ಪಾಠದಿಂದ ನಾಯಕರನ್ನು ಸೃಷ್ಟಿ ಮಾಡುವ ವಿದ್ಯಾಸಂಸ್ಥೆ ಶಾಂತಿ, ನೆಮ್ಮದಿ, ಸೌಹಾರ್ದತೆಯನ್ನು ದೇಶಕ್ಕೆ ಉಣಬಡಿಸುತ್ತಿದೆ. ಡಾ.ಯಶೋವರ್ಮರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸೌಹಾರ್ದತೆಗಾಗಿ ಪ್ರಯೋಗಶೀಲರಾಗಿ ತೊಡಗಿಸಿಕೊಳ್ಳಿ ಎಂದರು.

ಎಸ್ ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಶುಭ ಕೋರಿದರು.

ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮತ್ತು ವಿದ್ಯಾರ್ಥಿ ನಾಯಕ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಚಾರ್ಯ ಡಾ.ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ, ಕಾಲೇಜಿನ ವಾರ್ಷಿಕ ಸಾಧನೆಗಳ ವರದಿ ವಾಚಿಸಿದರು.

ಇದೇ ಸಂದರ್ಭ ವಿಶೇಷ ಸಾಧನೆಗೈದ ರ್ಯಾಂಕ್ ವಿಜೇತರು, ನಿವೃತ್ತ ಪ್ರಾಧ್ಯಾಪಕರು, ಪಿಎಚ್‌ಡಿ, ಸಂಶೋಧನೆ ಮತ್ತು ವಿಶೇಷ ಸಾಧಕ ಅಧ್ಯಾಪಕರು, ವಿಶೇಷ ಸಾಧಕ ವಿದ್ಯಾರ್ಥಿಗಳು, ಎನ್.ಸಿ.ಸಿ., ಎನ್.ಎಸ್.ಎಸ್. ಮತ್ತು ಕ್ರೀಡಾ ವಿಭಾಗದ ರಾಷ್ಟ್ರಮಟ್ಟದ ಸಾಧಕರನ್ನು ಗೌರವಿಸಲಾಯಿತು. ನಮೃತಾ ಜೈನ್, ಗೀತಾ, ನಫೀಸತ್ ಮತ್ತು ಮಾಧುರಿ ಸಾಧಕರ ವಿವರ ನೀಡಿದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಭಟ್ ನಿರೂಪಿಸಿದರು. ಕಾಲೇಜಿನ ಉಪಪ್ರಾಚಾರ್ಯ ಶಶಿಶೇಖರ ಕಾಕತ್ಕರ್ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.