ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.ಮುಖ್ಯ ಅತಿಥಿ, ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಹಾಗೂ ಹಿರಿಯ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಬಿ. ಎ. ಕುಮಾರ ಹೆಗ್ಡೆ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿ, ಎನ್ನೆಸ್ಸೆಸ್ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಒಂದು ಉತ್ತಮ ವೇದಿಕೆ. ವಿದ್ಯಾರ್ಥಿ ಜೀವನದಲ್ಲಿ ನೀವೆಲ್ಲರೂ ಪದವಿ ಮುಗಿಸುವುದಕ್ಕೂ ಮೊದಲೇ ಉತ್ತಮ ಅನುಭವಗಳನ್ನು ಹೊಂದಿದ್ದೀರಿ. ಈ ವಿಷಯದಲ್ಲಿ ನಿಮ್ಮ ಬಗ್ಗೆ ನೀವೇ ಹೆಮ್ಮೆ ಇಟ್ಟುಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲೆ ನಂದಾ ಕುಮಾರಿ ಕೆ.ಪಿ., ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎನ್ನೆಸ್ಸೆಸ್ ಘಟಕ ನಡೆಸಿದ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ವಯಂಸೇವಕಿ ದೀಪ ವಾರ್ಷಿಕ ವರದಿ ವಾಚಿಸಿದರು. ಸ್ವಯಂಸೇವಕರಾದ ರಾಮಕೃಷ್ಣ, ವಿಶ್ವಾಸ್, ವಿನ್ಯಾಸ್, ದೀಪ ಮತ್ತು ಶ್ವೇತಾ ತಮ್ಮ ಎನ್ನೆಸ್ಸೆಸ್ ಅನುಭವ ಹಂಚಿಕೊಂಡರು.
ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ವರ್ಷ ‘ಬದುಕು ಕಟ್ಟೋಣ ಬನ್ನಿ’ ತಂಡದೊಂದಿಗೆ ಕೈ ಜೋಡಿಸಿ ನಡೆಸಿದ ಗದ್ದೆ ನಾಟಿ ಕಾರ್ಯಕ್ರಮವು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸೇರಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾದರೆ, ಇದರ ಜೊತೆಗೆ ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ತಂಡದಿಂದ ಸುಮಾರು 500ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಣೆಯಾಗಿ ಹಲವರಿಗೆ ಅದರಿಂದ ಸಹಾಯವಾಗಿದೆ ಎಂಬುದು ಇನ್ನೊಂದು ಸಂತೋಷದ ವಿಚಾರ ಎಂದರು.ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸ್ವಯಂಸೇವಕರಿಗಾಗಿ ನಡೆದ ಒಂದು ದಿನದ ಸ್ಪರ್ಧೆ ‘ಸೃಜನಾ 2025’ರಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದ ಸ್ವಯಂಸೇವಕರು ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಎಸ್ ಡಿ ಎಂ ಎನ್ನೆಸ್ಸೆಸ್ ಘಟಕವನ್ನು ಪ್ರತಿನಿಧಿಸಿದ್ದ ಸ್ವಯಂಸೇವಕ ಶರಣಪ್ಪ ಅವರನ್ನು ಸನ್ಮಾನಿಸಲಾಯಿತು.
ಸ್ವಯಂಸೇವಕರಾದ ವಂಶಿ ಸ್ವಾಗತಿಸಿ, ವರ್ಷ ವಿ. ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ದೀಪಾ ಆರ್. ಪಿ. ವಂದಿಸಿದರು