11ನೇ ವರ್ಷಕ್ಕೆ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪಾದಾರ್ಪಣೆ

| Published : Jun 23 2024, 02:02 AM IST

11ನೇ ವರ್ಷಕ್ಕೆ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪಾದಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಳ್ಳಿಯ ಜನರ ಆರೋಗ್ಯ ರಕ್ಷಣೆಯ ಕಾಳಜಿಯಿಂದ ಗ್ರಾಮೀಣ ಜನತೆಯ ವೈದ್ಯಕೀಯ ಸೇವೆಗಾಗಿ 35 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿತು. ಈಗ ಸುಸಜ್ಜಿತ ಆಸ್ಪತ್ರೆಯಾಗಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ.ಹೇಮಾವತಿ ಹೆಗ್ಗಡೆ ದಂಪತಿಯ ಆಶಯದಂತೆ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾಮಾನ್ಯ ಆಸ್ಪತ್ರೆಯಾಗಿ ಆರಂಭಗೊಂಡ ಉಜಿರೆ ಎಸ್ ಡಿಎಂ ಆಸ್ಪತ್ರೆ, ಬಳಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಆರೋಗ್ಯ ಸೇವೆ ನೀಡುತ್ತಾ ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ಎಲ್ಲ ಅರ್ಹತೆಯೊಂದಿಗೆ ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.

ಆಸ್ಪತ್ರೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿಗೆ ಅಲೆದಾಡುವ ಹಳ್ಳಿಯ ಜನರ ಆರೋಗ್ಯ ರಕ್ಷಣೆಯ ಕಾಳಜಿಯಿಂದ ಗ್ರಾಮೀಣ ಜನತೆಯ ವೈದ್ಯಕೀಯ ಸೇವೆಗಾಗಿ 35 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿತು. ಈಗ ಸುಸಜ್ಜಿತ ಆಸ್ಪತ್ರೆಯಾಗಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದರು.

20 ತಜ್ಞ ವೈದ್ಯರು, 19 ಸೂಪರ್ ಸ್ಪೆಷಾಲಿಟಿ ವೈದ್ಯರು ಲಭ್ಯವಿದ್ದು ಹೆಚ್ಚಿನ ಸೇವೆಗಳು ದಿನದ 24 ಗಂಟೆಯೂ ಲಭ್ಯವಿದೆ, ವಿವಿಧ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದುರಹಿತ ಚಿಕಿತ್ಸೆ ಸೌಲಭ್ಯ, ಮಿತದರದಲ್ಲಿ ಹೈಟೆಕ್ ವೈದ್ಯಕೀಯ ಸೇವೆ, ಡಯಾಲಿಸಿಸ್, ಸಿಟಿ ಸ್ಕ್ಯಾನ್, ಡಿಜಿಟಲ್ ಎಂಆರ್ ಡಿ,ಕಾರ್ಡಿಕ್ ಆಂಬುಲೆನ್ಸ್, ದಂತ ಚಿಕಿತ್ಸಾಲಯ, ಕಣ್ಣಿನ ಶಸ್ತ್ರ ಚಿಕಿತ್ಸೆ, ಫೂಟ್ ಕೇರ್ ಸೆಂಟರ್, ಅಮ್ಮ ಬರ್ತ್ ಸೆಂಟರ್ ಮೊದಲಾದ ಸೌಲಭ್ಯಗಳೊಂದಿಗೆ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಕಳೆದ ಸಾಲಿನಲ್ಲಿ 2.23 ಕೋಟಿ ರು. ಮೌಲ್ಯದ ಔಷಧ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ ಎಂದರು.

ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಮತ್ತು ವೈದ್ಯರು ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ನಡೆಯುತ್ತಿದ್ದು ಕಳೆದ ಸಾಲಿನಲ್ಲಿ 58 ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 11,752 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ, ಶಿವರಾತ್ರಿ ಸಂದರ್ಭ 28,879 ಮಂದಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೇವೆ ಹಾಗೂ 6 ಲಕ್ಷ ರು. ಮೌಲ್ಯದ ಉಚಿತ ಔಷಧವನ್ನು ನೀಡಲಾಗಿದೆ ಎಂದರು.

ಆಸ್ಪತ್ರೆಯಲ್ಲಿ ಕೀ ಹೋಲ್ ಸರ್ಜರಿ ಮೂಲಕ ಕಿಡ್ನಿ ಸ್ಟೋನ್ ಸರ್ಜರಿ, ಗರ್ಭಕೋಶದ ಗೆಡ್ಡೆಯ ಶಸ್ತ್ರಚಿಕಿತ್ಸೆ, ಮಂಡಿ ಬದಲಿ ಜೋಡಣ ಶಸ್ತ್ರಚಿಕಿತ್ಸೆ, ಪಾದ ಮತ್ತು ಪಾದದ ಮಣಿಗಂಟು, ಬೆನ್ನು ಮೂಳೆ ಸಮಸ್ಯೆ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯು ಎನ್‌ಎಬಿಎಚ್ ಹಾಗೂ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯರನ್ನು ಪ್ರತಿನಿಧಿಸುವ ವೃತ್ತಿಪರ ಸಂಸ್ಥೆಯಾದ ಭಾರತದ ಪ್ರಸೂತಿ ಮತ್ತು ತ್ರಿರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ಸಂಸ್ಥೆಯಿಂದ ಸುರಕ್ಷತಾ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಅನುಸರಿಸುತ್ತಿರುವುದಕ್ಕೆ ಎಫ್‌ಒಜಿಎಸ್ ಐ ಮಾನ್ಯತೆ ಪ್ರಮಾಣ ಪತ್ರ ಪಡೆದಿದೆ ಎಂದು ಹೇಳಿದರು.

ಡಾ. ದೇವೇಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ಸ್ವಾತಿಕ್ ಜೈನ್ ಇದ್ದರು. ಆಸ್ಪತ್ರೆಯ ಪ್ರಬಂಧಕ ನಾರಾಯಣ ಬಿ. ಸ್ವಾಗತಿಸಿದರು.