ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯ ಗೋಪುರ ಲೋಕಾರ್ಪಣೆ, ಬ್ರಹ್ಮರಥ ಹಾಗೂ ಪುಷ್ಪ ರಥ ಸಮರ್ಪಣಾ ಮಹೋತ್ಸವ 3 ರಿಂದ 11ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಹಿನ್ನಲೆಯಲ್ಲಿ ತಾಲೂಕಿನ ಜನತೆಗೆ ಮಹೋತ್ಸವದ ಅರಿವು ಮೂಡಿಸಿ, ಜ್ಞಾಪಿಸುವ ಪ್ರಯುಕ್ತ ಉಜಿರೆಯ ವರ್ತಕರ ಸಂಘ, ಆಟೋರಿಕ್ಷಾ ಮಾಲಕರು ಹಾಗೂ ಭಕ್ತರ ಸಹಕಾರದಿಂದ ಭಾನುವಾರ ಬೆಳಿಗ್ಗೆ 11 ಕ್ಕೆ ಪುಂಜಾಲಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಬೃಹತ್ ವಾಹನ ಜಾಥಾಕ್ಕೆ ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಪ್ರಶಾಂತ್ ಪುಂಜಾಲಕಟ್ಟೆ ಮತ್ತು ಸ್ಥಳೀಯ ನಾಗರಿಕರು ಚಾಲನೆ ನೀಡಿದರು. 1೦೦ಕ್ಕೂ ಹೆಚ್ಚು ಸ್ಕೂಟರ್, ಮೋಟಾರ್ ಸೈಕಲ್ ಹಾಗೂ ಕಾರುಗಳು ಜಾಥಾದಲ್ಲಿ ಧರ್ಮಸ್ಥಳಕ್ಕೆ ಬಂದು ಬಳಿಕ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನ ಗೊಳಿಸಿದರು.ಈ ಸಂದರ್ಭದಲ್ಲಿ ಶುಭಾಶಂಸನೆಗೈದು ಮಾತನಾಡಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕ್ಷೇತ್ರದ ಬ್ರಹ್ಮಕಲಶೋತ್ಸವದ ಕುರಿತು ತಾಲೂಕಿನ ಮಹಾಜನತೆಗೆ ಮಾಹಿತಿ ನೀಡುವ ಸಲುವಾಗಿ ವರ್ತಕರ ಸಂಘ ಮತ್ತು ನಾಗರಿಕರು ಹಮ್ಮಿಕೊಂಡ ಬೃಹತ್ ಜಾಥಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀ ಜನಾರ್ದನ ಸ್ವಾಮಿ ಎಲ್ಲರಿಗೂ ಅನುಗ್ರಹಿಸಲಿ ಎಂದರು. 5 ರಂದು ಕ್ಷೇತ್ರಕ್ಕೆ ಬರಲಿರುವ ನೂತನ ಬ್ರಹ್ಮ ರಥವನ್ನು ನಾರಾವಿಯಿಂದ ಎದುರುಗೊಂಡು ಗುರುವಾಯನಕೆರೆಯಿಂದ ಬೃಹತ್ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದರು. ಉಜಿರೆ ವರ್ತಕ ಮತ್ತು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಸಾದ್ ಬಿ ಎಸ್ ನೇತೃತ್ವದಲ್ಲಿ ನಡೆದ ವಾಹನ ಜಾಥಾ ಸಮಾರೋಪದಲ್ಲಿ ಕಿರಣಚಂದ್ರ ಪುಷ್ಪಗಿರಿ, ಸಂಚಾಲಕ ಮೋಹನ ಕುಮಾರ್, ಮೋಹನ ಶೆಟ್ಟಿಗಾರ್, ರವೀಂದ್ರ ಶೆಟ್ಟಿ ಬಳಂಜ, ರವಿಕುಮಾರ್ ಬರಮೇಲು, ಭರತ್ ಕುಮಾರ್, ಆನಂದ ಸುವರ್ಣ, ರವಿಚಂದ್ರ ಚೆಕ್ಕಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಇಂದು ಪ್ರಾರಂಭೋತ್ಸವ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂಭೋತ್ಸವ 2ರಂದು ಬೆಳಿಗ್ಗೆ 9:30 ರಿಂದ ಆರಂಭವಾಗಲಿದೆ.ದೇವಳದ ನೂತನ ಆಡಳಿತ ಕಾರ್ಯಾಲಯ ಸುಶಾಸನ ಮತ್ತು ತಂತ್ರಿ ನಿವಾಸ ಸುವಾಸ ಉದ್ಘಾಟನೆಯನ್ನು ಶ್ರೀ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನೆರವೇರಿಸುವರು.
ಬ್ರಹ್ಮಕಲಶೋತ್ಸವದ ಕಾರ್ಯಾಲಯ ಸುರಭಿ ಉದ್ಘಾಟನೆಯನ್ನು ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು, ಭೋಜನ ಶಾಲೆ ಸುಪ್ರಸಾದ ಉದ್ಘಾಟನೆಯನ್ನು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ.ಭಿಡೆ, ಪಾಕಶಾಲೆ ಸುರುಚಿ ಉದ್ಘಾಟನೆಯನ್ನು ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್, ಹಸಿರು ವಾಣಿ ಉಗ್ರಾಣ ಸಮೃದ್ಧಿಯ ಉದ್ಘಾಟನೆಯನ್ನು ಎಸ್ ಕೆ ಡಿ ಆರ್ ಡಿಪಿಯ ಸಿಇಒ ಅನಿಲ್ ಕುಮಾರ್ ಎಸ್. ಎಸ್., ಮಾಧ್ಯಮ ಕೇಂದ್ರವನ್ನು ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿರುವರು. ಬೆಳಿಗ್ಗೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಬಳಿಯಿಂದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬೆಳ್ತಂಗಡಿ ವಲಯದಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ 10ಗಂಟೆಯಿಂದ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಲಿದೆ. ಸಂಜೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಉಜಿರೆಯ ದಕ್ಷಾ ಮೆಲೋಡೀಸ್ ತಂಡದವರಿಂದ ಸಂಗೀತ ಕಛೇರಿ ನಡೆಯಲಿದೆ.