ಬುಕ್ಕಾಂಬುದಿಗೆ ಉಜ್ಜಯನಿ ಶ್ರೀ ಪಾದಯಾತ್ರೆ

| Published : Nov 15 2025, 02:30 AM IST

ಸಾರಾಂಶ

ಉಜ್ಜಯನಿ ಸದ್ಧರ್ಮ ಪೀಠದಿಂದ ಬುಕ್ಕಾಂಬುದಿಗೆ 176 ಕಿ.ಮೀ. ದೂರದವರೆಗೆ ಡಿ.19ರಿಂದ ಪಾದಯಾತ್ರೆ ಆರಂಭ

ಕೊಟ್ಟೂರು: ಲಿಂ.ಜ. ಸಿದ್ದಲಿಂಗ ಶಿವಾಚಾರ್ಯರು ಬುಕ್ಕಾಂಬುದಿ ಗವಿಯಲ್ಲಿ ತಪೋನುಷ್ಠಾನಗೈದು ನೂರು ವರ್ಷಗಳು ಸಂದ ಕಾರಣಕ್ಕೆ ಉಜ್ಜಯನಿ ಸದ್ಧರ್ಮ ಪೀಠದಿಂದ ಬುಕ್ಕಾಂಬುದಿಗೆ 176 ಕಿ.ಮೀ. ದೂರದವರೆಗೆ ಡಿ.19ರಿಂದ ಪಾದಯಾತ್ರೆ ಆರಂಭಿಸುವುದಾಗಿ ಉಜ್ಜಯನಿ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.ಗುರುವಾರ ಸಂಜೆ ಇಲ್ಲಿನ ಚಾನುಕೋಟಿ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಾದಯಾತ್ರೆ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪಾದಯಾತ್ರೆ ಉಜ್ಜಯನಿಯಿಂದ ಆರಂಭಗೊಂಡು ಕೊಟ್ಟೂರು ಮೂಲಕ ಸಾಗಲಿದೆ. ಪಾದಯಾತ್ರೆಗೆ ರಂಭಾಪುರಿ ಜಗದ್ಗುರು ಚಾಲನೆ ನೀಡಲಿದ್ದು, ಇದಕ್ಕೆ ಪೂರಕವಾಗಿ ಸದ್ಧರ್ಮ ಪೀಠದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. 6 ದಿನಗಳ ನಂತರ ಬುಕ್ಕಾಂಬುದಿಗೆ ತಲುಪುತ್ತೇವೆ. ಈ ಕುರಿತ ಧಾರ್ಮಿಕ ಕಾರ್ಯಕ್ರಮಗಳು ಬುಕ್ಕಾಂಬುಧಿಯಲ್ಲಿ ಜನವರಿ 6ರಿಂದ ನಡೆಯಲಿವೆ. ಜ.6ರಂದು ರಂಭಾಪುರಿ, ಉಜ್ಜಯನಿ, ಕೇದಾರ, ಶ್ರೀಶೈಲ, ಕಾಶಿ ಜಗದ್ಗುರುಗಳ ಬೃಹತ್ ಅಡ್ಡಪಲ್ಲಕ್ಕಿ ಉತ್ಸವವನ್ನು ಅಲ್ಲಿನ ಭಕ್ತರು ಹಮ್ಮಿಕೊಂಡಿದ್ದಾರೆ. ಜ.7ರಂದು ಧಾರ್ಮಿಕ ಸಭೆ ನಡೆಯಲಿದೆ ಎಂದರು.

ಕಾಶಿಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಆಶೀರ್ವದಿಸಿ ಮಾತನಾಡಿ, ಉಜ್ಜಯನಿ ಜಗದ್ಗುರು ಬುಕ್ಕಾಂಬುದಿಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವತ್ತ ಮುಂದಾಗಿದ್ದಾರೆ. ಪಾದಯಾತ್ರೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಪಪಂ ಮಾಜಿ ಉಪಾಧ್ಯಕ್ಷ ಎಚ್.ಗುರುಬಸವರಾಜ, ವರ್ತಕ ಕಾರ್ತಿಕ, ರಾಂಪುರ ವಿವೇಕಾನಂದ, ಬಿ.ಪಂಪಾಪತಿ, ಬಿ.ಎಂ. ಗಿರೀಶ್, ಅಟವಾಳಿಗೆ ಅಮರೇಶ, ಭೋಜರಾಜ್, ಅಜ್ಜನಗೌಡ, ಚನ್ನವೀರಸ್ವಾಮಿ, ಉಜ್ಜಯನಿ ಲೋಕೇಶ್, ನಟರಾಜ್, ನಾಗರಾಜ ಗೌಡ ಭಾಗವಹಿಸಿದ್ದರು.