ಯುಕೆಪಿ: ಸರ್ಕಾರದ ನಿರ್ಧಾರಕ್ಕೆ ಕೈ ನಾಯಕರ ಹರ್ಷ

| Published : Sep 17 2025, 01:09 AM IST

ಸಾರಾಂಶ

ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಸಂತ್ರಸ್ತ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಮೂಲಕ, ಇದಕ್ಕಾಗಿ ಸುದೀರ್ಘ ಧ್ವನಿ ಎತ್ತಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಬಣ್ಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಸಂತ್ರಸ್ತ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಮೂಲಕ, ಇದಕ್ಕಾಗಿ ಸುದೀರ್ಘ ಧ್ವನಿ ಎತ್ತಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿದೆ ಎಂದು ಪ್ರಗತಿಪರ ರೈತ ಗೋವಿಂದಪ್ಪ ಗುಜ್ಜನ್ನವರ, ಗಿರೀಶಗೌಡ ಪಾಟೀಲ, ವೆಂಕಣ್ಣ ಗಿಡಪ್ಪನವರ, ಉದಯಕುಮಾರ ಸಾರವಾಡ, ಮಹಾಂತೇಶ ಮಾಚಕನೂರ, ಸಂಜಯ ತಳೇವಾಡ, ಸುಧಾಕರ ಸಾರವಾಡ, ಗಿರೀಶ ಲಕ್ಷಾಣಿ, ನಾರಾಯಣ ಹವಾಲ್ದಾರ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.ಸಚಿವರಿಗೆ ರೈತರ ಬಹುಪರಾಕ್‌:

​ಕಳೆದ ಹಲವು ದಿನಗಳಿಂದ ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕಾಗಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರು. ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂಬುದು ಅವರ ಬಲವಾದ ವಾದವಾಗಿತ್ತು. ಸಚಿವರ ಹುಟ್ಟುಹಬ್ಬದ ದಿನದಂದೇ ಸಚಿವ ಸಂಪುಟ ಸಭೆ ನಡೆದು ಒಪ್ಪಿತ ಪರಿಹಾರ ಘೋಷಣೆ ಮಾಡಿದೆ. ಇದು ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಚಿವರ ಬದ್ಧತೆ ಮತ್ತು ಸರ್ಕಾರದ ಕಾಳಜಿ ಎತ್ತಿ ತೋರಿಸಿದೆ. ಈ ತೀರ್ಮಾನ ಬಾಕಿ ಉಳಿದ ಪರಿಹಾರ ಮೊತ್ತ ಬಿಡುಗಡೆ ಮಾಡಲು ಮತ್ತು ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ದಾರಿಯಾಗಿದೆ. ಬಹುದಿನಗಳ ರೈತರ ಕನಸು ನನಸಾಗಿದ್ದು, ಸರ್ಕಾರದ ಬದ್ಧತೆ, ರೈತರಿಗೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.

ಸಚಿವ ಆರ್.ಬಿ.ತಿಮ್ಮಾಪೂರ ಅವರ ಹುಟ್ಟುಹಬ್ಬವನ್ನು ಸೆ.16 ಬದಲು 15ಕ್ಕೆ ಆಚರಿಸಿದ ಅಭಿಮಾನಿ ಬಳಗದ ವೈಯಕ್ತಿಕ ಆಚರಣೆಯಾಗಿಸದೆ, ಕ್ಷೇತ್ರದ ಮತ್ತು ಜಿಲ್ಲೆಯ ರೈತರ ಬದುಕಿನಲ್ಲಿ ಬೆಳಕು ಮೂಡಿಸುವ ಐತಿಹಾಸಿಕ ಆಚರಣೆ ಆದಂತಾಗಿದೆ ಎಂದು ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಘು ಮೋಕಾಸಿ ತಿಳಿಸಿದ್ದಾರೆ.

ಕಾನೂನು ಸಚಿವ ಹೆಚ್.ಕೆ.ಪಾಟೀಲ, ಮಾಜಿ ಸಚಿವ ಎಸ್.ಆರ್.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಪ್ರಗತಿಪರ ರೈತರಾದ ವೆಂಕಣ್ಣ ಗಿಡ್ಡಪ್ಪನವರ, ಅದೃಷ್ಪಪ್ಪ ದೇಸಾಯಿ ಇತರರು ಸಚಿವ ಆರ್.ಬಿ. ತಿಮ್ಮಾಪೂರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು.