ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಡಿಎಪಿ ಗೊಬ್ಬರ ಉತ್ಪಾದನೆಗೆ ಬೇಕಾಗುವ ರಂಜಕ ಆಮದು ಮಾಡಿಕೊಳ್ಳಲು ಸಮಸ್ಯೆಯಾಗಿದ್ದರಿಂದ ದೇಶದಲ್ಲಿ ಡಿಎಪಿ ಗೊಬ್ಬರ ಉತ್ಪಾದನೆ ಗಣನೀಯವಾಗಿ ತಗ್ಗಿದೆ. ಹೀಗಾಗಿ, ರಾಜ್ಯದಲ್ಲಿಯೂ ಪೂರ್ವ ಮುಂಗಾರು ಪ್ರಾರಂಭವಾಗುವ ಮೊದಲೇ ಅಭಾವ ಎದುರಾಗಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ ಬೇಡಿಕೆಯ ಶೇ. 30ರಷ್ಟು ಡಿಎಪಿ ರಸಗೊಬ್ಬರ ಈಗ ಲಭ್ಯವಿದ್ದು, ಇನ್ನು ಬರಬೇಕಾಗಿದೆ. ಹೀಗಾಗಿ, ರಾಜ್ಯ ಸರ್ಕಾರವೇ ಡಿಎಪಿ ರಸಗೊಬ್ಬರ ಬದಲಾಗಿ ಅದಕ್ಕಿಂತ ಸೂಕ್ತವಾಗಿರುವ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಮಾಡಿ ಎಂದು ಜಾಗೃತಿ ಮೂಡಿಸುತ್ತಿದೆ. ಇದಕ್ಕಿಂತ ಮಿಗಿಲಾಗಿ ದೇಶಿಯವಾಗಿಯೇ ಉತ್ಪಾದನೆಯಾಗುವ ನ್ಯಾನೋ ಡಿಎಪಿ ಬಳಕೆಗೆ ರೈತರಲ್ಲಿ ಮನವಿ ಮಾಡಲಾಗುತ್ತಿದೆ.ರಾಜ್ಯದಲ್ಲಿ ಪೂರ್ವ ಮುಂಗಾರು ಅತ್ಯುತ್ತಮವಾಗಿ ಆಗಿದ್ದರಿಂದ ಈ ವರ್ಷ ಮುಂಗಾರು ಬಿತ್ತನೆ ನಿರೀಕ್ಷೆಗೂ ಮೊದಲೇ ಪ್ರಾರಂಭವಾಗಿದೆ. ರೈತರು ಸಹ ಬಿತ್ತನೆಗೆ ಡಿಎಪಿ ರಸಗೊಬ್ಬರವೇ ಸೂಕ್ತವಾಗಿದ್ದು, ಅದೇ ಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳ ದುಂಬಾಲು ಬೀಳುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯ ಸರ್ಕಾರದ ಶಿಫಾರಸಿನಂತೆ 4 ಲಕ್ಷ ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಅಗತ್ಯವಾಗಿದೆ. ಆದರೆ, ವಾಸ್ತವದಲ್ಲಿ ಬೇಡಿಕೆ ಇರುವುದು 8 ಲಕ್ಷ ಟನ್‌ಗೂ ಅಧಿಕ. ಸದ್ಯ ರಾಜ್ಯದಲ್ಲಿ ಸಂಗ್ರಹವಿರುವ ಡಿಎಪಿ ರಸಗೊಬ್ಬರ ಪ್ರಮಾಣ (ಮೇ 25ಕ್ಕೆ) 1,45,344 ಮೆಟ್ರಿಕ್ ಟನ್ ಮಾತ್ರ. ಇದರಲ್ಲಿ ಮಾರಾಟವಾಗಿ 74,246 ಟನ್ ಮಾತ್ರ ಸಂಗ್ರಹವಿದೆ. ಆದರೆ, ಕಾಂಪ್ಲೆಕ್ಸ್ ರಸಗೊಬ್ಬರ ಮಾತ್ರ 9,90,000 ಮೆಟ್ರಿಕ್ ಟನ್ ಬೇಕಾಗಿದ್ದು, ಈಗಾಗಲೇ 7,20,700 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಇದರಲ್ಲಿ ಮಾರಾಟವಾಗಿ 5,35,322 ಮೆಟ್ರಿಕ್ ಟನ್ ಮಾತ್ರ ಉಳಿದಿದೆ.
ಯೂರಿಯಾ ಗೊಬ್ಬರದ ಪ್ರಸಕ್ತ ವರ್ಷದ ಬೇಡಿಕೆ 11,17,000 ಮೆಟ್ರಿಕ್ ಟನ್ ಆಗಿದ್ದರೆ 5,71,205 ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹವಿದೆ. ಇದರಲ್ಲಿ ಮಾರಾಟವಾಗಿ 3,62,808 ಮೆಟ್ರಿಕ್ ಟನ್ ಲಭ್ಯವಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಯೂರಿಯಾ ಬೇಡಿಕೆ ಇದಾಗಿದ್ದು, ವಾಸ್ತವದಲ್ಲಿ ದುಪ್ಪಟ್ಟು ಬೇಡಿಕೆ ಇದೆ. ಆದರೆ, ಯೂರಿಯಾ ಬಳಕೆಯ ಬದಲಿಗೆ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ.ಯಾಕೆ ಅಭಾವ?
ಡಿಎಪಿ ರಸಗೊಬ್ಬರ ಉತ್ಪಾದನೆಗೆ ಬೇಕಾಗಿರುವ ರಂಜಕ ರಷ್ಯಾ ಮತ್ತು ಉಕ್ರೇನ್ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕು. ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಆಮದು ನಿರೀಕ್ಷೆಯಷ್ಟು ಆಗುತ್ತಿಲ್ಲ. ಮತ್ತೊಂದೆಡೆ ರಂಜಕವೂ ದುಬಾರಿ ಆಗಿದೆ. ಕೇಂದ್ರ ಸರ್ಕಾರ ಘೋಷಿಸಿರುವ ಸಬ್ಸಿಡಿ ಲೆಕ್ಕಚಾರದಲ್ಲಿ ಈಗ ರಂಜಕ ಆಮದು ಮಾಡಿಕೊಂಡರೆ ರಸಗೊಬ್ಬರ ಉತ್ಪಾದನಾ ಕಂಪನಿಗೆ ₹ 4000 ಪ್ರತಿ ಕ್ವಿಂಟಲ್‌ಗೆ ನಷ್ಟವಾಗುತ್ತದೆ. ಹೀಗಾಗಿಯೇ ರಸಗೊಬ್ಬರ ಉತ್ಪಾದಿಸುವ ಕಂಪನಿಗಳು ಡಿಎಪಿ ಗೊಬ್ಬರ ಉತ್ಪಾದಿಸಲು ಹಿಂದೇಟು ಹಾಕುತ್ತಿವೆ. ಕೇಂದ್ರ ಸರ್ಕಾರವೂ ಸಹ ಡಿಎಪಿಗೆ ಬದಲಾಗಿ ಕಾಂಪ್ಲೆಕ್ಸ್ ಉತ್ತಾದಿಸಲು ಸೂಚನೆ ನೀಡಿದೆ ಎನ್ನಲಾಗಿದೆ. ಡಿಎಪಿಯಲ್ಲಿ ರಂಜಕವನ್ನು ಶೇ. 60ರಷ್ಟು ಬಳಕೆ ಮಾಡಿದರೆ ಕಾಂಪ್ಲೆಕ್ಸ್ ರಸಗೊಬ್ಬರದಲ್ಲಿ ಶೇ. 20ರಷ್ಟು ಬಳಸಲಾಗುತ್ತದೆ.ನ್ಯಾನೋ ಯೂರಿಯಾ, ಡಿಎಪಿ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳನ್ನು ತರಿಸಿಕೊಂಡು ಯೂರಿಯಾ, ಡಿಎಪಿ ಗೊಬ್ಬರ ಉತ್ಪಾದಿಸುವುದು ಕೇಂದ್ರ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ದೇಶಿಯವಾಗಿದೇ ನ್ಯಾನೋ ಯೂರಿಯೂ, ಡಿಎಪಿ ಗೊಬ್ಬರ (ಲಿಕ್ವಿಡ್) ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲಾಗಿದೆ. ಸಾಕಷ್ಟು ಪೂರೈಕೆ ಇದ್ದರೂ ಸಹ ರೈತರು ಬಳಸುತ್ತಿಲ್ಲ. ಆದರೆ ಕಳೆದರೆಡು ವರ್ಷಕ್ಕೆ ಹೋಲಿಸಿದರೆ ಬಳಕೆದಾರರ ಪ್ರಯಾಣ ಹೆಚ್ಚಿಸಿದೆ.ರೈತರ ಬೆಳೆಗೆ ಡಿಎಪಿ ರಸಗೊಬ್ಬರಕ್ಕಿಂತಲೂ ಕಾಂಪ್ಲೆಕ್ಸ್ ರಸಗೊಬ್ಬರ ಸೂಕ್ತವಾಗಿದೆ. ಹೀಗಾಗಿ, ಡಿಎಪಿ ಅಭಾವ ಇರುವುದರಿಂದ ಕಾಂಪ್ಲೆಕ್ಸ್ ಬಳಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಿಂತ ಮಿಗಿಲಾಗಿ ನ್ಯಾನೋ ಯುರಿಯಾ ಮತ್ತು ಡಿಎಪಿ ಅತ್ಯಂತ ಸೂಕ್ತವೂ ಆಗಿದೆ ಮತ್ತು ಲಭ್ಯವೂ ಇದೆ.
ರುದ್ರೇಶಪ್ಪ, ಜೆಡಿ ಕೃಷಿ ಇಲಾಖೆ ಕೊಪ್ಪಳ