ಸಾರಾಂಶ
ಧಾರವಾಡ: ಶ್ರಾವಣ ಮಾಸದ ಕೊನೆ ಸೋಮವಾರ ಇಲ್ಲಿಯ ಶ್ರೀಉಳವಿ ಚನ್ನಬಸವೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಚನ್ನಬಸವೇಶ್ವರರಿಗೆ ವಿಶೇಷ ಪೂಜೆ, ಅಭಿಷೇಕ, ರುದ್ರ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.ಸಂಜೆ 5ಕ್ಕೆ ನಡೆದ ರಥೋತ್ಸವಕ್ಕೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಉಪ್ಪಿನ ಬೆಟಗೇರಿ ಕುಮಾರ ವಿರುಪಾಕ್ಷ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನದದಿಂದ ಹೊರಟ ರಥವು ಉಳವಿ ಚನ್ನಬಸವೇಶ್ವರ ವರ್ತುಳ ಹಾಗೂ ಹಿಂದಿ ಪ್ರಚಾರ ಸಭಾ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿ ಸಂಪನ್ನಗೊಂಡಿತು.
ರಥೋತ್ಸವದುದ್ದಕ್ಕೂ ಭಕ್ತರು ಜೈ ಚನ್ನಬಸವೇಶ ಹರ... ಹರ... ಮಹಾದೇವ ಎಂಬ ಘೋಷಣೆ ಕೂಗಿದರು. ಅಲ್ಲದೇ ನೆರೆದಿದ್ದ ಅಪಾರ ಜನಸ್ತೋಮವು ರಥಕ್ಕೆ ಹಣ್ಣು, ಉತ್ತತ್ತಿ, ಬಾಳೆ, ಕಿತ್ತಳೆ ಫಲ ಪುಷ್ಪ ಸಮರ್ಪಿಸಿ ಭಕ್ತಿಯ ಸಾಗರದಲ್ಲಿ ಮಿಂದೆದ್ದರು. ಜಾಂಜು, ಡೊಳ್ಳು ಜಗ್ಗಲಗಿ ಹೆಜ್ಜೆಮೇಳ, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ದರ್ಶನ ಪಡೆದು ಮಹಾಪ್ರಸಾದದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಉಳವಿ ಬಸವೇಶ್ವರ ಧರ್ಮ ಫಂಡ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಕಾರ್ಯಾಧ್ಯಕ್ಷ ಡಾ. ಕೆ.ಎಂ.ಗೌಡರ, ಗೌರವ ಕಾರ್ಯದರ್ಶಿ ಆರ್.ವೈ.ಸುಳ್ಳದ ಹಾಗೂ ಧರ್ಮದರ್ಶಿ ಟಿ.ಎಲ್. ಪಾಟೀಲ, ಬಸವರಾಜ ಸೂರಗೊಂಡ, ಜಿ.ಬಿ. ಅಳಗವಾಡಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ಸುರೇಶ ಹೆಗ್ಗೇರಿ, ಶಂಕರ ಪಾಗದ, ವಿಜಯೇಂದ್ರ ಪಾಟೀಲ, ಜಿ.ಟಿ. ಶಿರೋಳ, ಸಂಜೀವಕುಮಾರ ಲಕಮನಹಳ್ಳಿ ಇದ್ದರು.