ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿದ್ದರು. ಬಳಿಕ ದೇಶದ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ), ಪುಣೆಯಲ್ಲಿ ಮೂರು ವರ್ಷಗಳ ಸೈನಿಕ ತರಬೇತಿ ಪಡೆದಿದ್ದಾರೆ.

ಮೂಲ್ಕಿ: ದ.ಕ.ಜಿಲ್ಲೆ ಉಳ್ಳಾಲ ತಾಲೂಕು ಹರೇಕಳ ಉಳಿದೊಟ್ಟುವಿನ ರಮೇಶ್ ಶೆಟ್ಟಿ ಮತ್ತು ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಮೂಡುದೇವಸ್ಯದ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದು ಜಿಲ್ಲೆಯ ಜನತೆಗೆ ಹೆಮ್ಮೆ ನೀಡಿದ್ದಾರೆ.ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿದ್ದರು. ಬಳಿಕ ದೇಶದ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ), ಪುಣೆಯಲ್ಲಿ ಮೂರು ವರ್ಷಗಳ ಸೈನಿಕ ತರಬೇತಿ ಪಡೆದಿದ್ದಾರೆ. ಈ ಅವಧಿಯಲ್ಲಿ ಸೂಪರ್ ಡಿಮೋನಾ ವಿಮಾನವನ್ನು ಹಾರಿಸುವ ತರಬೇತಿಯನ್ನೂ ಪಡೆದು, ತಮ್ಮ ವೈಮಾನಿಕ ಪಯಣಕ್ಕೆ ಭದ್ರ ಬುನಾದಿ ಹಾಕಿಕೊಂಡರು.

ಎನ್‌ಡಿಎಯಲ್ಲಿ ತರಬೇತಿ ಪೂರ್ಣಗೊಳಿಸಿದ ಬಳಿಕ ಹೈದರಾಬಾದ್‌ನ ವಾಯುಪಡೆ ಅಕಾಡೆಮಿಯಲ್ಲಿ ಒಂದು ವರ್ಷದ ವೈಮಾನಿಕ ತರಬೇತಿ ಪಡೆದು ಅಲ್ಲಿ ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ಹಾರಾಟದ ತರಬೇತಿ ಪಡೆದ ಅವರು, ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದರು. ಇದೇ ಅವಧಿಯಲ್ಲಿ ಬಿ.ಟೆಕ್. ಪದವಿ ಪಡೆದರು.

2022 ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜನೆಗೊಂಡರು. ನಂತರ ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ಹಾಕ್ ಯುದ್ಧವಿಮಾನದಲ್ಲಿ ಒಂದು ವರ್ಷದ ಬೇಸಿಕ್ ಯುದ್ಧವಿಮಾನ ತರಬೇತಿ ಪೂರ್ಣಗೊಳಿಸಿದರು. ಈ ಹಂತದಲ್ಲಿಯೂ ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ತರಬೇತಿ ಬಳಿಕ, ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರಿಗೆ ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧವಿಮಾನವನ್ನು ಹಾರಿಸುವ ಅವಕಾಶ ದೊರೆಯಿತು. ಅಂಬಾಲಾದ 17ನೇ ಸ್ಕ್ವಾಡ್ರನ್, ಗೋಲ್ಡನ್ ಆರೋಸ್‌ ಗೆ ನಿಯೋಜನೆಗೊಂಡ ಅವರು, ರಫೇಲ್ ವಿಮಾನದಲ್ಲಿ ಪರಿವರ್ತನಾ ತರಬೇತಿ ಪೂರ್ಣಗೊಳಿಸಿ, ಪ್ರಸ್ತುತ ರಫೇಲ್ ಯುದ್ಧವಿಮಾನದ ಪೂರ್ಣ ಕಾರ್ಯಾಚರಣಾ ಸಾಮರ್ಥ್ಯ ಹೊಂದಿದ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ವಾರಾಣಸಿಯಲ್ಲಿ ನಡೆದ ಭಾರತೀಯ ವಾಯುಪಡೆಯ 94ನೇ ವಾಯುಪಡೆ ದಿನದ ವೈಮಾನಿಕ ಪ್ರದರ್ಶನ ‘ವಿಂಗ್ಸ್ ಓವರ್ ಗಂಗೇಸ್’ನಲ್ಲಿ ಭಾಗವಹಿಸಿದ್ದರು.ಈ ವೈಮಾನಿಕ ಪ್ರದರ್ಶನದಲ್ಲಿ ಮೂರು ರಫೇಲ್ ಯುದ್ಧವಿಮಾನಗಳನ್ನು ಒಳಗೊಂಡ ‘ನೀಲಕಂಠ’ ರಚನೆಯ ಭಾಗವಾಗಿ ಅವರು ಹಾರಾಟ ನಡೆಸಿದರು. ಈ ರಚನೆಯಲ್ಲಿ ಮಧ್ಯದ ಪ್ರಮುಖ ಸ್ಥಾನದಲ್ಲಿ ಹಾರಾಟ ನಡೆಸುವ ಮೂಲಕ ತಮ್ಮ ವೃತ್ತಿಪರ ಕೌಶಲ ಮತ್ತು ವೈಮಾನಿಕ ಸಾಮರ್ಥ್ಯ ಪ್ರದರ್ಶಿಸಿದರು.

ಅವರು ಹರೇಕಳ ಉಳಿದೊಟ್ಟು ರಮೇಶ್ ಶೆಟ್ಟಿ-ಕೊಡೆತ್ತೂರು ಮೂಡುದೇವಸ್ಯ ಸೀತಾ ಆರ್. ಶೆಟ್ಟಿ ದಂಪತಿ ಪುತ್ರ. ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಕಾರ್ಯಾಚರಣಾ ಪೈಲಟ್ ಆಗಿ ಬೆಳೆದಿರುವ ಅವರ ಪಯಣ, ಯುವಜನರಿಗೆ ಸ್ಫೂರ್ತಿದಾಯಕವಾಗಿದ್ದು, ಜೊತೆಗೆ ಜಿಲ್ಲೆಗೆ ಹೆಮ್ಮೆಯಾಗಿದೆ.