ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆಯ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕೊಣಾಜೆ ಗ್ರಾಮ ಪಂಚಾಯಿತಿ ವಿಶ್ವವಿದ್ಯಾನಿಲಯಕ್ಕೆ 25 ಸಾವರ ರು. ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ.

ಕ್ಯಾಂಪಸ್‌ನಲ್ಲಿ ಕಸವನ್ನು ರಾಶಿ ಮಾಡಿ ಸುಡುವ ಬಗ್ಗೆ ನಿರಂತರವಾಗಿ ಬಂದ ದೂರುಗಳ ಹಿನ್ನೆಲೆಯಲ್ಲಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಕಸವನ್ನು ನಿಗದಿತ ಸ್ಥಳದಲ್ಲಿ ಹಾಕಿ ಸುಡಲಾಗುತ್ತಿರುವುದು ದೃಢಪಟ್ಟಿದೆ. ವಿಶೇಷವಾಗಿ ಪ್ಲಾಸ್ಟಿಕ್‌ ಸುಡುವುದರಿಂದ ಹೊರಬರುವ ಹೊಗೆ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ.

ಈ ಹಿನ್ನೆಲೆ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದಂಡ ವಿಧಿಸಲಾಗಿದ್ದು, 10 ದಿನಗಳೊಳಗೆ ದಂಡ ಪಾವತಿಸಲು ಸೂಚಿಸಲಾಗಿದೆ. ವಿಫಲವಾದಲ್ಲಿ ಎಫ್‌ಐಆರ್‌ ದಾಖಲಿಸುವ ಎಚ್ಚರಿಕೆ ನೋಟಿಸ್‌ನಲ್ಲಿ ನೀಡಲಾಗಿದೆ ಎಂದು ಕೊಣಾಜೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕುಲಸಚಿವ ಡಾ. ಗಣೇಶ್ ಸಂಜೀವ್ ಹಾಗೂ ಪಂಚಾಯತ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಶೇಷ ಸಭೆ ನಡೆಸಿದರು. ಸಭೆಯಲ್ಲಿ ಹೊರಗಿನಿಂದ ಕಸ ತಂದು ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಸಿಸಿಟಿವಿ ಅಳವಡಿಕೆ ಮಾಡುವುದು ಮತ್ತು ಕಸದ ವೈಜ್ಞಾನಿಕ ವಿಲೇವಾರಿ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಸಚಿವ ಡಾ. ಗಣೇಶ್ ಸಂಜೀವ್ ತಿಳಿಸಿದ್ದಾರೆ.