ಧಾರವಾಡ:
ವಿಶ್ವದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದಾದ ಅಲ್ಟ್ರಾಮನ್ ಆಸ್ಟ್ರೇಲಿಯಾವನ್ನು ಇಲ್ಲಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಸದಾನಂದ ಅಮರಾಪೂರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.ನಿರಂತರವಾಗಿ 10 ಕಿಮೀ ಈಜು, 421 ಕಿಮೀ ಸೈಕ್ಲಿಂಗ್ ಮತ್ತು 84 ಕಿಮೀ ಅಲ್ಟ್ರಾಮ್ಯಾರಥಾನ್ ಓಟ ಸೇರಿದಂತೆ ಸುಮಾರು 515 ಕಿಮೀ ಒಟ್ಟು ದೂರವನ್ನು 36 ಗಂಟೆಯೊಳಗೆ ಕ್ರಮಿಸಬೇಕಿತ್ತು. ಆದರೆ, ಅಮರಾಪೂರ ಅವರು 31 ಗಂಟೆ 35 ನಿಮಿಷ 9 ಸೆಕೆಂಡುಗಳ ಒಳಗೆ ಈವೆಂಟ್ ಅನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಈ ಸವಾಲು ಪೂರೈಸಿದ ಕರ್ನಾಟಕದ ಮೊದಲಿಗರಾಗಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅಮರಾಪುರ, ಈ ಪ್ರಯಾಣವು ಸುಮಾರು ಎರಡು ವರ್ಷಗಳ ನಿರಂತರ ಕಠಿಣ ಪರಿಶ್ರಮ, ತ್ಯಾಗ ಮತ್ತು ಶಿಸ್ತಿನ ತರಬೇತಿಯ ಫಲಿತಾಂಶವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮಾತ್ರವಲ್ಲದೇ ಹೆಚ್ಚುವರಿಯಾಗಿ ಕ್ರೀಡಾ ಇಲಾಖೆ ಜವಾಬ್ದಾರಿ ಸಹ ನನ್ನ ಮೇಲಿದೆ. ಕಚೇರಿ ಸಮಯದ ನಂತರ ತಡರಾತ್ರಿ ಸೈಕ್ಲಿಂಗ್ ಮತ್ತು ಓಟದೊಂದಿಗೆ ಕಠಿಣ ತಯಾರಿ ಮಾಡಿದ್ದೆನು. ಈ ಸಾಧನೆಗಾಗಿ ವೈಯಕ್ತಿಕ ಸಭೆ-ಸಮಾರಂಭ, ಪ್ರವಾಸಗಳನ್ನು ಕೈ ಬಿಟ್ಟು ಗುರಿಯತ್ತ ತೊಡಗಿದ್ದೆನು ಎಂದರು.ತಮ್ಮ ಪತ್ನಿ ಮುಕ್ತಾ ಹಾಗೂ ಸ್ನೇಹಿತ, ತರಬೇತುದಾರ ಪ್ರಶಾಂತ ಹಿಪ್ಪರಗಿ ಅವರು ಪ್ರಯಾಣದ ಉದ್ದಕ್ಕೂ ತರಬೇತಿ, ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ಒದಗಿಸಿದರು ಎಂದ ಅವರು, ಈ ಸಾಧನೆಯನ್ನು ತಮ್ಮ ದಿ. ತಂದೆ, ಕುಸ್ತಿಪಟುವಾಗಿದ್ದ ಎಚ್.ಎನ್. ಅಮರಾಪುರ್ ಅವರಿಗೆ ಅರ್ಪಿಸುತ್ತೇನೆ ಎಂದರು.