ಕನ್ನಡಪ್ರಭ ವಾರ್ತೆ ಧಾರವಾಡ

ವಿಶ್ವದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದಾದ ಅಲ್ಟ್ರಾಮನ್ ಆಸ್ಟ್ರೇಲಿಯಾವನ್ನು ಇಲ್ಲಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಸದಾನಂದ ಅಮರಾಪೂರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ನಿರಂತರವಾಗಿ 10 ಕಿ.ಮೀ. ಈಜು, 421 ಕಿ.ಮೀ. ಸೈಕ್ಲಿಂಗ್ ಮತ್ತು 84 ಕಿ.ಮೀ. ಅಲ್ಟ್ರಾಮ್ಯಾರಥಾನ್ ಓಟವನ್ನು 36 ಗಂಟೆಯೊಳಗೆ ಕ್ರಮಿಸಬೇಕಿತ್ತು. ಆದರೆ, ಅಮರಾಪೂರ ಅವರು 31 ಗಂಟೆ 35 ನಿಮಿಷ 9 ಸೆಕೆಂಡುಗಳ ಒಳಗೆ ಸ್ಪರ್ಧೆ ಪೂರ್ತಿಗೊಳಿಸಿದರು. ಆ ಮೂಲಕ ಈ ಸವಾಲು ಪೂರೈಸಿದ ಕರ್ನಾಟಕದ ಮೊದಲಿಗ ಎನ್ನುವ ಹಿರಿಮೆಗೆ ಪಾತ್ರರಾದರು.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅಮರಾಪುರ, ಈ ಪ್ರಯಾಣವು ಸುಮಾರು 2 ವರ್ಷಗಳ ನಿರಂತರ ಕಠಿಣ ಪರಿಶ್ರಮ, ತ್ಯಾಗ ಮತ್ತು ಶಿಸ್ತಿನ ತರಬೇತಿಯ ಫಲಿತಾಂಶವಾಗಿದೆ ಎಂದಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮಾತ್ರವಲ್ಲದೇ ಹೆಚ್ಚುವರಿಯಾಗಿ ಕ್ರೀಡಾ ಇಲಾಖೆ ಜವಾಬ್ದಾರಿ ಸಹ ನನ್ನ ಮೇಲಿದೆ. ಕಚೇರಿ ಸಮಯದ ನಂತರ ತಡರಾತ್ರಿ ಸೈಕ್ಲಿಂಗ್ ಮತ್ತು ಓಟದೊಂದಿಗೆ ಕಠಿಣ ತಯಾರಿ ಮಾಡಿದ್ದೆನು. ಈ ಸಾಧನೆಗಾಗಿ ವೈಯಕ್ತಿಕ ಸಭೆ-ಸಮಾರಂಭ, ಪ್ರವಾಸಗಳನ್ನು ಕೈ ಬಿಟ್ಟು ಗುರಿಯತ್ತ ತೊಡಗಿದ್ದೆನು ಎಂದು ಹೇಳಿದ್ದಾರೆ.