ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿಭಾರತೀಯರು ಶುಚಿ-ರುಚಿ ಆಹಾರ ಪ್ರಿಯರಾಗಿದ್ದು, ಮಾಂಸಾಹಾರ ಹಾಗೂ ಸಸ್ಯಾಹಾರ ತಯಾರಿಕೆಯಲ್ಲಿ ಸಾಂಬಾರ ಪದಾರ್ಥಗಳು ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳದಲ್ಲೂ ಬೇಡಿಕೆಯನ್ನು ಹೊಂದಿವೆ.
ಉಪಾಹಾರದ ಹೊಟೇಲ್‌ಗಳು ಸೇರಿದಂತೆ ಸಾವಜಿ ಖಾನಾವಳಿ, ಮಾಂಸಾಹಾರಿ ಹೊಟೇಲ್‌ಗಳು ಹಾಗೂ ವಾರಾಂತ್ಯದಲ್ಲಿ ಮಾಂಸಹಾರಿಗಳ ಮನೆ ಮನೆಗಳಿಗೂ ಹಾಗೂ ಇಸ್ಲಾಂ ಬಾಂಧವರ ಬಕ್ರೀದ್ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಬ್ಬಳ್ಳಿಯಲ್ಲಿ ಮಸಾಲೆ ಪದಾರ್ಥಗಳು ಖರ್ಚಾಗುತ್ತವೆ.ಹೊಟೇಲ್ ಮಾಲೀಕರ ಸಂಘದ ಮಾಹಿತಿಯಂತೆ ಹುಬ್ಬಳ್ಳಿಯಲ್ಲೇ 422ಕ್ಕೂ ಹೆಚ್ಚು ಹೊಟೇಲ್‌ಗಳು ಇದ್ದು, 242 ಹೊಟೇಲ್‌ಗಳು ಸಂಘದಲ್ಲಿ ನೋಂದಣಿಯಾಗಿದ್ದು, ಇವರೆಲ್ಲ ಖಾದ್ಯಗಳ ತಯಾರಿಕೆಗೆ ಮಸಾಲೆ ಪದಾರ್ಥಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿ ಮಸಾಲೆ ಪದಾರ್ಥಗಳಿಗೆ ಬೃಹತ್ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ.
ಸಾಂಬಾರ ಪದಾರ್ಥಗಳಿಗೆ ಭಾರತ ಹತ್ತಾರು ದಶಕಗಳಿಂದ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಎಂಟಿಆರ್, ಆಚೆ ಸಾಂಬಾರ ಪೌಡರ್, ಎವರೆಸ್ಟ್ ಮಸಾಲಾ ಹೀಗೆ ತರಹೇವಾರಿ ಕಂಪನಿಗಳು ಚಿಕನ್, ಮಟನ್ ಹಾಗೂ ಸಾಂಬಾರ ಹಾಗೂ ತಿಳಿಸಾಂಬಾರ, ಕೂರ್ಮಾ, ಪುಳಿಯೋಗೆರ, ಮಸಾಲಾ ರೈಸ್, ಫ್ರೈಡ್ ರೈಸ್ ಹೀಗೆ ಸಸ್ಯಾಹಾರಿಗಳಿಗೂ ಸಾಂಬಾರ ಪದಾರ್ಥಗಳು ಲಗ್ಗೆ ಇಟ್ಟಿದ್ದರೂ ಈ ಸಾಂಬಾರ ಪೌಡರ್ ತಯಾರಿಸುವ ಕಚ್ಚಾ ಪದಾರ್ಥಗಳಿಗೂ ಬೇಡಿಕೆ ಕಡಿಮೆ ಆಗಿಲ್ಲ.ಸಾಸ್ವಿ, ಜೀರಿಗೆ, ಬಳ್ಳೊಳ್ಳಿ, ಅರಿಶಿನ, ಯಾಲಕ್ಕಿ, ದಾಲ್ಚಿನಿ, ಲವಂಗ, ಜಾಯಿಕಾಯಿ, ಕರಿಮೆಣಸು, ಗಸಗಸೆ, ಹವೀಜ, ಶುಂಠಿ ಹೀಗೆ ತರಹೇವಾರಿ ಮಸಾಲೆ ಪದಾರ್ಥಗಳಿದ್ದು, ಮನೆ ಒಡತಿಯರು ತಮಗೆ ಬೇಕಾದ ಸಾಂಬಾರ ಪೌಡರ್‌ಗಳನ್ನು ತಯಾರಿಸಲು ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಪುಡಿ ರೂಪದಲ್ಲಿ ತಯಾರಿಸಿಕೊಳ್ಳುತ್ತಾರೆ. ಇವುಗಳಲ್ಲಿ ಆಯುರ್ವೇದಿಕ್ ಔಷಧೀಯ ಗುಣಗಳು ಹೇರಳವಾಗಿರುವುದರಿಂದ ಹೃದಯ ಕಾಯಿಲೆ, ಕೆಮ್ಮು, ಕಫ, ನೆಗಡಿ, ಜ್ವರ ಹೀಗೆ ಅನೇಕ ಕಾಯಿಲೆಗಳನ್ನು ಶಮನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಮನೆ ಮದ್ದುಗಳೆಂದೇ ಹೆಸರುವಾಸಿಯಾಗಿವೆ.
ಏಲಕ್ಕಿ ಬೆಲೆ ₹700 ಹೆಚ್ಚಳಮಸಾಲೆ ಪದಾರ್ಥಗಳಲ್ಲೇ ಏಲಕ್ಕಿ ಅತ್ಯಂತ ಹೆಚ್ಚಿನ ಬೆಲೆ ಹೊಂದಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲೇ ಕಿಲೋಗೆ 3200 ರು. ಮಾರಾಟವಾಗುತ್ತಿದೆ. 3 ತಿಂಗಳ ಹಿಂದಷ್ಟೇ ಏಲಕ್ಕಿ ಕಿಲೋಗೆ 2500 ರು. ಇತ್ತು. ಇತ್ತೀಚೆಗೆ 700 ರು.ಹೆಚ್ಚಳವಾಗಿದ್ದು, ಗ್ರಾಹಕರನ್ನು ಬೆಚ್ಚಿಬೀಳಿಸಿದೆ. 4 ತಿಂಗಳ ಹಿಂದೆ ಕಿಲೋಗೆ 720 ರು. ಇದ್ದ ಜೀರಗಿ ಬೆಲೆ 320 ರು. ಗೆ ಕುಸಿದಿದ್ದು, ಗ್ರಾಹಕರು ನಿಟ್ಟಿಸಿರು ಬಿಟ್ಟಿದ್ದಾರೆ. ಉತ್ತಮ ಗುಣಮಟ್ಟದ ಬ್ಯಾಡಗಿ ಮೆಣಸಿನಕಾಯಿ ಕಾರಪುಡಿ 300 ರು. ಮೇಲ್ಪಟ್ಟು ಇದೆ. ಆದರೆ ಹುಬ್ಬಳ್ಳಿಯಲ್ಲಿ ಕಡಿಮೆ ಬೆಲೆಗೂ ಕಾರಪುಡಿ ಸಿಗುತ್ತದೆ. ಆದರೆ ಗುಣಮಟ್ಟದ ಗ್ಯಾರಂಟಿ ಇಲ್ಲ.
ಚಕ್ಕಿ ಕೇರಳದಿಂದಲೂ ಹಾಗೂ ಮೆಣಸು ಯಲ್ಲಾಪುರದಿಂದ, ಹವೀಜ ಮಧ್ಯಪ್ರದೇಶದ ಇಂದೋರನಿಂದ, ಜೀರಗಿ ರಾಜಸ್ಥಾನದಿಂದಲೂ ಇಲ್ಲಿಯ ಸಗಟು ವ್ಯಾಪಾರಸ್ಥರು ಹುಬ್ಬಳ್ಳಿಗೆ ತರಿಸುತ್ತಾರೆ.ಹುಬ್ಬಳ್ಳಿಯ ಎಪಿಎಂಸಿ (ಅಮರಗೋಳ) ಯಲ್ಲಿ ಸಗಟು ಮಸಾಲೆ ಪದಾರ್ಥಗಳ ಅಂಗಡಿಗಳಿದ್ದು, ಇಲ್ಲಿಂದಲೇ ಉತ್ತರ ಕರ್ನಾಟಕ ಬಹುತೇಕ ತಾಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳಿಗೂ ಮಸಾಲೆ ಪದಾರ್ಥಗಳು ರವಾನೆಯಾಗುತ್ತವೆ. ಇಲ್ಲಿಯ ದುರ್ಗದ ಬೈಲ್‌ನಲ್ಲಿ ಎಂ.ಜಿ. ಮಾರ್ಕೇಟ್ ಹಾಗೂ ಜನತಾ ಬಜಾರದಲ್ಲೂ ಎಲ್ಲ ಮಸಾಲೆ ಪದಾರ್ಥಗಳ ಅಂಗಡಿಗಳಿದ್ದು, ಸಗಟು ಬೆಲೆ ಸೇರಿದಂತೆ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಇತ್ತೀಚಿಗೆ ದಿನಸಿ ಪದಾರ್ಥಗಳ ಮಾರಾಟ ಅಂಗಡಿಗಳಲ್ಲೂ ಮಸಾಲೆ ಪದಾರ್ಥಗಳು ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯಂತೆ ಮಾರಾಟ ಮಾಡುತ್ತಾರೆ.ಮಾರುಕಟ್ಟೆಯಲ್ಲಿ ಎಷ್ಟೇ ಮಸಾಲೆ ಪೌಡರ್‌ಗಳು ಬಂದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಕಚ್ಚಾ ಪದಾರ್ಥಗಳಾದ ಹವೀಜ, ಕರಿಮೆಣಸು, ಮೆಂತ್ಯೆಕಾಳು, ಚಕ್ಕಿ ಮತ್ತಿತರವುಗಳನ್ನು ತೆಗೆದುಕೊಂದು ಹೋಗಿ ತಾವೇ ಸ್ವತಃ ಮಸಾಲೆ ಪೌಡರ್‌ಗಳನ್ನು ತಯಾರಿಸಿಕೊಳ್ಳುತ್ತಾರೆ ಎಂದು ಮಸಾಲೆ ಅಂಗಡಿ ಮಾಲೀಕ ಶಬ್ಬೀರ್ ಹೇಳಿದರು.
ನಾವು ಮಾಂಸಾಹಾರ ತಯಾರಿಕೆಗೆ ಮಸಾಲೆ ಕಚ್ಚಾ ಪದಾರ್ಥಗಳನ್ನೇ ಖರೀದಿಸಿ ಚೆಕನ್, ಮಟನ್‌ಗೆ ಬೇಕಾದ ಮಸಾಲೆ ಪೌಡರನ್ನು ತಯಾರಿಸಿಕೊಳ್ಳುತ್ತೇವೆ. ಬೆಲೆ ಹೆಚ್ಚಳವಾಗಿದ್ದರೂ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಮಸಾಲೆ ಊಟದ ರುಚಿ ಹೆಚ್ಚಿಸುತ್ತದೆ ಎಂದು ಕೇಶ್ವಾಪುರದ ಹನುಮಂತಪ್ಪ ಹೇಳಿದರು.