ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೆ- ಶಿಪ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಹೆದ್ದಾರಿಯ ಹಲವು ಕಡೆ ಸೂಕ್ತ ಎಚ್ಚರಿಕೆ ಫಲಕಗಳು, ವೇಗ ನಿಯಂತ್ರಣ ಸೂಚನೆಗಳು, ಪ್ರತಿಫಲಕಗಳು, ರಸ್ತೆ ಗುರುತುಗಳು ಹಾಗೂ ರಾತ್ರಿ ವೇಳೆ ಗೋಚರಿಸುವ ಸುರಕ್ಷತಾ ವ್ಯವಸ್ಥೆಗಳ ಕೊರತೆಯಿಂದ ವಾಹನ ಸವಾರರು ಅಪಾಯದ ನಡುವೆ ಸಂಚರಿಸುವಂತಾಗಿದೆ.
ಕೆಲವು ಕಡೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಹಾಗೂ ತಾತ್ಕಾಲಿಕ ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಅಳವಡಿಸದಿರುವುದರಿಂದ ಅಪಘಾತಗಳ ಸಂಭವ ಹೆಚ್ಚಾಗಿದೆ. ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಶಾಲೆಗಳು, ಗ್ರಾಮಗಳ ಪ್ರವೇಶ ದ್ವಾರಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವೇಗ ನಿಯಂತ್ರಣ ವ್ಯವಸ್ಥೆ, ಬೀದಿದೀಪಗಳು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ರಸ್ತೆಬದಿ ಗಿಡಗಂಟಿಗಳನ್ನು ತೆರವುಗೊಳಿಸಿ ದೃಶ್ಯ ಸ್ಪಷ್ಟತೆ ಕಲ್ಪಿಸಬೇಕು ಹಾಗೂ ಹಾಳಾಗಿರುವ ರಸ್ತೆ ಭಾಗಗಳನ್ನು ತಕ್ಷಣ ದುರಸ್ತಿಪಡಿಸಬೇಕಿದೆ.ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಒಂದಾಗಿದೆ. ಈ ಹೆದ್ದಾರಿ ಗದಗ ಜಿಲ್ಲೆಯ ಜನರಿಗೆ ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಹಲವು ಪಟ್ಟಣಗಳ ಮೂಲಕ ಹೊನ್ನಾಳಿ ಸಂಪರ್ಕ ಕಲ್ಪಿಸುತ್ತದೆ. ಕೃಷಿ, ವ್ಯಾಪಾರ, ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಈ ರಸ್ತೆ ಅತ್ಯಂತ ಮಹತ್ವದ್ದಾಗಿದೆ.
ವಾಹನಗಳು ಅತಿವೇಗದಲ್ಲಿ ಸಂಚರಿಸುವುದರಿಂದ ರಸ್ತೆ ದಾಟುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ರೈತರು ಜೀವಭಯದಲ್ಲೇ ಸಂಚರಿಸುವಂತಾಗಿದೆ. ಈಗಾಗಲೇ ಹಲವು ಅಪಘಾತಗಳಲ್ಲಿ ಅಮೂಲ್ಯ ಜೀವಗಳು ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಪಘಾತಗಳಿಗೆ ಕಾರಣವಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಮತ್ತಷ್ಟು ಅಮೂಲ್ಯ ಜೀವ ಹಾನಿಯಾಗುವ ಮುನ್ನ ಕೆ- ಶಿಪ್ ಸಂಸ್ಥೆ ಹಾಗೂ ಸಂಬಂಧಿಸಿದ ಇಲಾಖೆ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಕೆ- ಶಿಪ್ ಸಂಸ್ಥೆಯವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸ್ಥಳೀಯವಾಗಿ ಯಾರನ್ನು ಕೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಇತ್ತೀಚೆಗೆ ನಿರಂತರ ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಜೀವ ಕಳೆದುಕೊಳ್ಳುತ್ತಿವೆ. ರಸ್ತೆಯುದ್ದಕ್ಕೂ ಎಲ್ಲಿಯೂ ಸುರಕ್ಷತಾ ಕ್ರಮ ಅಳವಡಿಸಿಲ್ಲ ಎನ್ನುತ್ತಾರೆ ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ.ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಬೆಂಗಳೂರುನಲ್ಲಿರುವ ಕೆ ಶಿಪ್ ಸಂಸ್ಥೆಯ ಅಧಿಕಾರಿಗಳು ರಾಜ್ಯ ಹೆದ್ದಾರಿ ಕಾಮಗಾರಿ ಮಾಡುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಕೆ. ಶಿವಪ್ರಸಾದ ತಿಳಿಸಿದ್ದಾರೆ.