ವಿದ್ಯೆ ಎಂಬುದು ಯಾರೂ ಕಸಿಯದ ಸಂಪತ್ತಾಗಿದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅವರ ಬದುಕು ಭವಿಷ್ಯ ಉಜ್ವಲಗೊಂಡು ಸಮಗ್ರ ಭಾರತದ ಅಭಿವೃದ್ಧಿಗೆ ಪೂರಕವಾಗುತ್ತದೆ

ಬಳ್ಳಾರಿ: ತಾಲೂಕಿನ ಡಿ.ಕಗ್ಗಲ್ ಗ್ರಾಮದ ಶ್ರೀಚಾಣಕ್ಯ ಶಾಲೆಯಲ್ಲಿ ಶುಕ್ರವಾರ ಅಕ್ಷರಾಭ್ಯಾಸ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದ ಸೋಮಸಮುದ್ರ ಗ್ರಾಮದ ಕೊಟ್ಟೂರುಸ್ವಾಮಿ ಶಾಖಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಪ್ರಾಥಮಿಕ ಶಿಕ್ಷಣ ಮಗುವಿನ ಜೀವನ ಮೊದಲ ಮೆಟ್ಟಿಲಾಗಿದ್ದು, ಉಜ್ವಲ ಭವಿಷ್ಯದ ಭದ್ರ ಅಡಿಪಾಯವೂ ಆಗಿದೆ. ಮಗುವಿನ ವ್ಯಕ್ತಿತ್ವ, ಜ್ಞಾನ, ಶಿಸ್ತು, ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳು ಪ್ರಾಥಮಿಕ ಹಂತದಲ್ಲಿಯೇ ರೂಪುಗೊಳ್ಳುತ್ತವೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಪ್ರಮಾಣಿಕತೆ, ಸಮಯಪಾಲನೆ, ಮೌಲ್ಯಗಳ ಕುರಿತು ತಿಳಿಸಿಕೊಡುವುದರಿಂದ ಮಕ್ಕಳು ಉತ್ತಮ ನಾಗರಿಕರಾಗಿ ಬಾಳುತ್ತಾರೆ ಎಂದು ತಿಳಿಸಿದರು.

ವಿದ್ಯೆ ಎಂಬುದು ಯಾರೂ ಕಸಿಯದ ಸಂಪತ್ತಾಗಿದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅವರ ಬದುಕು ಭವಿಷ್ಯ ಉಜ್ವಲಗೊಂಡು ಸಮಗ್ರ ಭಾರತದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಂತಕ ಚಂದ್ರಶೇಖರಗೌಡ ಮಸೀದಿಪುರ ಅವರು, ಬಾಲ್ಯದಲ್ಲಿ ಸಿಗುವ ಶಿಕ್ಷಣದ ಮಹತ್ವ ಕುರಿತು ವಿವರಿಸಿದರಲ್ಲದೆ, ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಒಳಿತು ಕೇಳುವ ಹಾಗೂ ಒಳಿತು ಆಲೋಚಿಸುವ ಶಕ್ತಿಯನ್ನು ವೃದ್ಧಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ತಿಳಿಸಿದರು.

ದೊಡ್ಡ ದೊಡ್ಡ ಸಾಧಕರು ತಂದೆ-ತಾಯಿ, ಶಿಕ್ಷಕರು ಹೇಳಿಕೊಟ್ಟ ನೀತಿ ಕಥೆಗಳನ್ನು ಕೇಳಿಯೇ ಬೆಳೆದವರು. ಆ ಕಥೆಗಳಿಂದ ಪ್ರೇರಣೆಗೊಂಡವರು. ನೆಲದಲ್ಲಿ ಬಿತ್ತುವ ಬೀಜ ಬಹು ವರ್ಷಗಳ ಬಳಿಕ ನೆರಳು, ಫಲ ನೀಡುವಂತೆಯೇ ಅಕ್ಷರಾಭ್ಯಾಸ ಪಡೆಯುವ ಮಕ್ಕಳು ಜ್ಞಾನವಂತರಾಗಿ ಸಮಾಜಕ್ಕೆ ಫಲ ನೀಡುವವರಾಗುತ್ತಾರೆ ಎಂದು ಹೇಳಿದರು.

ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಮಾತನಾಡಿ, ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದರಿಂದಾಗುವ ಪ್ರಯೋಜನಗಳು ಹಾಗೂ ಪೋಷಕರು ಮಕ್ಕಳ ಜೊತೆಯಲ್ಲಿರುವಾಗ ಹೇಗೆ ನಡೆದುಕೊಳ್ಳಬೇಕು. ಯಾವ ವಿಚಾರಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳಬಾರದು. ಪೋಷಕರ ನಡೆ-ನುಡಿಗಳು ಮಕ್ಕಳ ಮೇಲೆ ಹೇಗೆ ಪ್ರಭಾವಿಸುತ್ತದೆ ಎಂಬುದರ ಕುರಿತು ತಿಳಿಸಿದರು. ಗ್ರಾಮದ ಆಧ್ಯಾತ್ಮಿಕ ಚಿಂತಕ ಸದಾನಂದಸ್ವಾಮಿ ಮಾತನಾಡಿದರು.ಶಾಲೆಯ ಮುಖ್ಯಗುರು ವಿ. ಶಿವಾಚಾರಿ, ಸಹ ಮುಖ್ಯಗುರು ಎನ್. ಭಾರತಿ ಹಾಗೂ ಶಾಲೆಯ ಬೋಧಕ ಸಿಬ್ಬಂದಿ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರಾದ ಪಲ್ಲವಿ ಹಾಗೂ ರೂಪಾ ನಿರ್ವಹಿಸಿದರು. ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಮುಗಿದ ಬಳಿಕ ಪೋಷರಿಗೆ ನೂರಾರು ಸಸಿಗಳನ್ನು ವಿತರಣೆ ಮಾಡಲಾಯಿತು.

ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಶ್ರೀ ಚಾಣಕ್ಯ ಶಾಲೆಯ ವಿದ್ಯಾರ್ಥಿಗಳಿಗೆ ಸೋಮಸಮುದ್ರ ಗ್ರಾಮದ ಕೊಟ್ಟೂರುಸ್ವಾಮಿ ಶಾಖಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಕ್ಷರಾಭ್ಯಾಸ ಮಾಡಿಸಿದರು.