ಅಡುಗೆ ಅನಿಲ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಶುಕ್ರವಾರ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಬ್ರಹ್ಮಗಿರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಉಡುಪಿ: ಅಡುಗೆ ಅನಿಲ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಶುಕ್ರವಾರ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಬ್ರಹ್ಮಗಿರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅನೇಕ ತಪ್ಪು ನೀತಿಗಳಿಂದಾಗಿ ದೇಶದಲ್ಲಿ ಅಘೋಷಿತ ಕರ್ಪ್ಯೂ ಹೇರಿಕೆಯಾಗಿದೆ. ಮೊದಲು ಸಣ್ಣ ಉದ್ದಿಮೆದಾರರ ಮೇಲೆ ಪ್ರಹಾರ ಮಾಡಿ, ಜನಸಾಮಾನ್ಯರನ್ನು ಬಡತನಕ್ಕೆ ದೂಡುವ ಪ್ರಯತ್ನ ಮಾಡಿದೆ. ಈಗ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹಲವು ಹೋಟೆಲುಗಳು ಮುಚ್ಚಿದ್ದು, ಹೊಟೇಲ್ ಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಳೆದುಕೊಳ್ಳುವಂತಾಗಿದೆ ಕೇಂದ್ರ ಸರ್ಕಾರವು ಬೆಲೆ ಏರಿಕೆ ಮಾಡಿರುವುದನ್ನು ತಕ್ಷಣ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ಇನ್ನೊಂದು ಪರಿಣಾಮ ವಾಣಿಜ್ಯ ಸಿಲಿಂಡರ್ ಏರಿಕೆ, ಇದರಿಂದ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲ, ಹೊಟೇಲ್‌ಗಳನ್ನು ಅವಲಂಭಿಸಿರುವ ಕೋಟ್ಯಾಂತರ ಜನಸಾಮಾನ್ಯರಿಗೂ ತೊಂದರೆ ಆಗಿದೆ. ತನ್ನ ಪೊಳ್ಳು ಭರವಸೆ, ಕುಟಿಲ ನೀತಿಯ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ತಕ್ಷಣ ದೇಶದಲ್ಲಿ ಬೆಲೆ ಏರಿಕೆ ಮಾಡಿ ತಮ್ಮ ಮತದಾರರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಳಬೈಲ್, ಹರಿಪ್ರಸಾದ್ ರೈ, ಜ್ಯೋತಿ ಹೆಬ್ಬಾರ್, ಶಬರೀಶ್ ಸುವರ್ಣ, ಸುರಯ್ಯ ಅಂಜುಮ್, ಸಜ್ಜನ್ ಶೆಟ್ಟಿ, ನವೀನ್ ಸಾಲ್ಯಾನ್, ಅಕ್ಷತ್ ಪೈ ಮೊದಲಾದವರು ಭಾಗವಹಿಸಿದ್ದರು.