ಯಲಬುರ್ಗಾ: ತಾಲೂಕಿನ ಮರಕಟ್ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ಶ್ರೀಶರಣ ಬಸವೇಶ್ವರ ದೇವಸ್ಥಾನದ ಪಾದಗಟ್ಟೆವರೆಗೆ ಗ್ರಾಪಂದಿಂದ ಗುರುವಾರ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು.

ತಾಳಕೇರಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಮರಕಟ್ ಗ್ರಾಮದಲ್ಲಿ ಗುರುವಾರ ಬೆಳಗ್ಗೆಯೇ ಅನಧಿಕೃತ ಕಟ್ಟಡಗಳನ್ನು ಜೆಸಿಬಿ ಯಂತ್ರದ ಮೂಲಕ ಗ್ರಾಪಂ ಪಿಡಿಒ ರಮೇಶ ಹೊಸ್ಮನಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದುಕೊಂಡು ತೆರವು ಕಾರ್ಯಾಚರಣೆಗೆ ಮುಂದಾದರು. ಇಲ್ಲಿನ ಸಾರ್ವಜನಿಕರು ಕೆಲಹೊತ್ತು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ಘಟನೆಯೂ ಜರುಗಿತು. ನಂತರ ಪಿಡಿಒ ಅವರು ಸ್ಥಳೀಯ ಹಿರಿಯರನ್ನು ಮನವೊಲಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾದರು.

ಪಿಡಿಒ ರಮೇಶ ಹೊಸ್ಮನಿ, ಕರ ವಸೂಲಿಗಾರ ಪ್ರಕಾಶ ವಾಲ್ಮೀಕಿ ಮಾತನಾಡಿ, ಮರಕಟ್ ಗ್ರಾಮದ ಶ್ರೀಶರಣಬಸವೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ರಥ ಚಲಿಸುವ ಬೀದಿಯು ಮುಖ್ಯ ರಸ್ತೆಯ ಕೆಲ ಕಡೆ ಇಕ್ಕಟ್ಟಾದ ಸ್ಥಳವಿದೆ. ಹೀಗಾಗಿ ಬಸ್ ನಿಲ್ದಾಣದಿಂದ ಶರಣಬಸವೇಶ್ವರ ದೇವಸ್ಥಾನದ ಪಾದಗಟ್ಟೆವರೆಗೆ ಬರುವ ರಸ್ತೆಯ ಎರಡೂ ಬದಿಯಲ್ಲಿ ಕೆಲ ನಿವಾಸಿಗಳು ಅನಧಿಕೃತವಾಗಿ ನಿರ್ಮಿಸಿಕೊಂಡ ಕಟ್ಟಡಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಲಾಗಿದೆ ಎಂದರು.

ಈ ಸಂದರ್ಭ ಕರವಸೂಲಿಗಾರ ಮಂಜುನಾಥ ಹೂಗಾರ ಹಾಗೂ ಗ್ರಾಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.