ಎಗ್ಗಿಲ್ಲದೇ ನಡೆದಿದೆ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್ ದಂಧೆ!

| Published : Mar 22 2024, 01:00 AM IST

ಎಗ್ಗಿಲ್ಲದೇ ನಡೆದಿದೆ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್ ದಂಧೆ!
Share this Article
  • FB
  • TW
  • Linkdin
  • Email

ಸಾರಾಂಶ

ಬಡವರ ಮನೆ ಸೇರಬೇಕಿದ್ದ ಅಡುಗೆ ಅನಿಲ ಬಳಸಿಕೊಂಡು ನಗರದಲ್ಲಿ ಎಲ್ಲೆಂದರಲ್ಲಿ ಎಲ್ಪಿಜಿ ಹೊಂದಿರುವ ಆಟೋಗಳಿಗೆ, ಗ್ಯಾಸ್ ಸ್ಟೋವ್ಗಳಿಗೆ, ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ದಂಧೆ ರಾಜಾರೋಷವಾಗಿಯೇ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿ, ಜನನಿಬಿಡ ಪ್ರದೇಶಗಳಲ್ಲೇ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಬಡವರ ಮನೆ ಸೇರಬೇಕಿದ್ದ ಅಡುಗೆ ಅನಿಲ ಬಳಸಿಕೊಂಡು ನಗರದಲ್ಲಿ ಎಲ್ಲೆಂದರಲ್ಲಿ ಎಲ್‌ಪಿಜಿ ಹೊಂದಿರುವ ಆಟೋಗಳಿಗೆ, ಗ್ಯಾಸ್ ಸ್ಟೋವ್‌ಗಳಿಗೆ, ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ದಂಧೆ ರಾಜಾರೋಷವಾಗಿಯೇ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿ, ಜನನಿಬಿಡ ಪ್ರದೇಶಗಳಲ್ಲೇ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.

ಮಾತ್ರಲ್ಲದೇ ತೇಕಡೆ ಗಲ್ಲಿ ರಸ್ತೆ ಮತ್ತು ಜುಮ್ಮಾ ಮಸೀದಿ ರಸ್ತೆ ಸೇರಿದಂತೆ ಯಾವುದೇ ರಸ್ತೆಗೆ ಹೋದರೂ ಅಲ್ಲಿನ ಕೆಲವು ಹೋಟೆಲ್‌ಗಳಲ್ಲಿ ವಾಣಿಜ್ಯ ಸಿಲಿಂಡರ್ ಬಳಸುವ ಬದಲು ಗೃಹೋಪಯೋಗಿ ಸಿಲಿಂಡರ್ ಇಟ್ಟು ಅಕ್ರಮವಾಗಿ ಅಡುಗೆ ಮಾಡುವುದು ಕಾಣಸಿಗುತ್ತದೆ. ಕಳೆದ ಹಲವು ವರ್ಷಗಳಿಂದ ಇದು ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ನಿತ್ಯ ಓಡಾಡುವ ರಸ್ತೆಗಳಲ್ಲಿ ಹಾಗೂ ನಗರದ ಗಾಂಧಿಚೌಕ್‌ ಪೊಲೀಸ್ ಠಾಣೆ ಸನಿಹದಲ್ಲಿ ಈ ದಂಧೆ ನಡೆದರೂ ಯಾರೊಬ್ಬರೂ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸವೇ ಸರಿ.

ಹೊರಗೆ ಬೇರೆ ಬೋರ್ಡ್, ಒಳಗೆ ಬೇರೆ ದಂಧೆ:

ನಗರದಲ್ಲಿ ಬಹುತೇಕ ಕಡೆಗಳಲ್ಲಿ ಅಂಗಡಿಗಳ ಮೇಲೆ ಪಾನ್‌ಶಾಪ್, ಪಂಚರ್ ಅಂಗಡಿ, ಗ್ಯಾರೇಜ್, ಚಹಾ ಅಂಗಡಿ ಎಂದೆಲ್ಲ ಹೊರಭಾಗದಲ್ಲಿ ನಾಮಫಲಕಗಳನ್ನು ಹಾಕಲಾಗಿರುತ್ತದೆ. ಆದರೆ, ಒಳಗಡೆ ಹತ್ತಾರು ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್‌ಗಳನ್ನು, ರಿಫಿಲ್ಲಿಂಗ್ ಯಂತ್ರಗಳನ್ನು ಇರಿಸಿಕೊಂಡು ಈ ಅಕ್ರಮ ದಂಧೆಯನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ನಗರದಲ್ಲಿರುವ ಲಕ್ಷ್ಮೀ ಚಿತ್ರಮಂದಿರದ ಅಕ್ಕಪಕ್ಕ, ಅಲಂಕಾರ ಥೇಟರ್ ಎದುರಿನ ರಸ್ತೆ, ಬಾಗಲಕೋಟೆ ಕ್ರಾಸ್ ಬಳಿ, ಮನಗೂಳಿ ರಸ್ತೆಯಲ್ಲಿ ಸೇರಿದಂತೆ ಹಲವೆಡೆ ಇದು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರೇ ದೂರಿದ್ದಾರೆ.

ಕಳೆದ ಹಲವು ವರ್ಷಗಳಿಂದ ಬೇರು ಬಿಟ್ಟಿರುವ ಈ ದಂಧೆ ಮಾಡುವವರಿಗೆ ಕೆಲವು ಗ್ಯಾಸ್ ಏಜೆನ್ಸಿಗಳಿಂದ ಬ್ಲಾಕ್‌ಗಳಲ್ಲೇ ಕೇಳಿದಷ್ಟು ಗೃಹೋಪಯೋಗಿ ಸಿಲಿಂಡರ್ ಸಿಗುತ್ತಿವೆ ಎನ್ನಲಾಗುತ್ತಿದೆ. ಹಾಗಾಗಿ ಕಡಿಮೆ ಬೆಲೆಗೆ ಡೊಮೆಸ್ಟಿಕ್ ಸಿಲಿಂಡರ್‌ಗಳನ್ನು ತಂದು ಆಟೋಗಳಿಗೆ ತುಂಬಿಸಲಾಗುತ್ತದೆ. ಈಗಾಗಲೇ ನಗರದಲ್ಲಿ ಎಲ್‌ಪಿಜಿ ಗ್ಯಾಸ್ ತುಂಬಿಸುವ ಬಂಕ್‌ ಗಳಿದ್ದರೂ ಇಲ್ಲಿ ಕಡಿಮೆ ಬೆಲೆಗೆ ಗ್ಯಾಸ್ ತುಂಬಿಸಿ ಕೊಡುವುದರಿಂದ ಆಟೋದವರು ಸಹ ಇಲ್ಲಿಯೇ ಫಿಲ್ ಮಾಡಿಸುತ್ತಾರೆ.

ಅನಧಿಕೃತ ದಂಧೆಕೋರರಿಗೆ ಹೇಗೆ ಲಾಭ:

14 ಕೆಜಿಯ ಡೊಮೆಸ್ಟಿಕ್ ಸಿಲಿಂಡರ್ ₹850ಕ್ಕೆ ಸಿಗುತ್ತಿದೆ. ಅಂದರೆ ಒಂದು ಕೆಜಿಗೆ ₹60ಯಂತೆ ತಂದು ₹100ಕೆಜಿಯಂತೆ ಆಟೋಗಳಿಗೆ ತುಂಬಿಸಿ ಕೊಟ್ಟು ಒನ್ ಟು ಡಬಲ್ ಲಾಭ ಮಾಡಿಕೊಳ್ತಾರೆ. ಈ ಗ್ಯಾಸ್ ಕಡಿಮೆ ಬೆಲೆಗೆ ಸಿಗುವುದರಿಂದ ಹಾಗೂ ಹೆಚ್ಚು ಮೈಲೇಜ್ ಕೂಡ ಸಿಗುತ್ತದೆ ಎಂಬ ನಂಬಿಕೆ ಮೇಲೆ ಆಟೋದವರು ಸಹ ಕ್ಯೂ ಹಚ್ಚಿಯಾದರೂ ಸರಿ ಎಂದು ಇದನ್ನೇ ತುಂಬಿಸಿಕೊಳ್ಳುತ್ತಾರೆ.

ಕ್ರಮ ಕೈಗೊಳ್ಳಬೇಕಿದೆ ಅಧಿಕಾರಿಗಳು:

ನಗರ ಸೇರಿದಂತೆ ಜಿಲ್ಲಾದ್ಯಂತ ಹಲವಾರು ಕಡೆಗಳಲ್ಲಿ ಅನಧಿಕೃತವಾಗಿ ಗ್ಯಾಸ್ ರಿಫಿಲ್ ಮಾಡುವುದು ಹಾಗೂ ಹೋಟೆಲ್‌ಗಳಲ್ಲೂ ಅನಧಿಕೃತವಾಗಿ ಗೃಹೋಪಯೋಗಿ ಸಿಲಿಂಡರ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇನ್ನಾದರೂ ಸಂಬಂಧಿತ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಂಡು, ಅಕ್ರಮಕ್ಕೆ ಬ್ರೇಕ್ ಹಾಕಿ, ಮುಂದೆ ಮತ್ಯಾರೂ ಈ ರೀತಿ ಅಕ್ರಮ ದಂಧೆ ನಡೆಸದಂತೆ ತಡೆಗಟ್ಟಬೇಕಿದೆ.

---

ಕೋಟ್‌....ನಮ್ಮ ಅಧಿಕಾರಿಗಳ ತಂಡ ಸನ್ನದ್ಧವಾಗಿದ್ದು, ಆಗಾಗ ರೇಡ್‌ಗಳನ್ನು ಮಾಡಲಾಗುತ್ತಿದೆ. ನಮ್ಮ ಗಮನಕ್ಕೆ ಬಂದ ತಕ್ಷಣವೇ ನಾವು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

-ವಿನಯಕುಮಾರ ಪಾಟೀಲ್, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

---

ನಗರ ಸೇರಿದಂತೆ ವಿಜಯಪುರ ಜಿಲ್ಲಾದ್ಯಂತ ಗೃಹೋಪಯೋಗಿ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡು ಆಟೋಗಳಿಗೆ ಫಿಲ್ ಮಾಡಲಾಗುತ್ತಿದೆ. ಈ ಅಕ್ರಮ ದಂಧೆಯನ್ನು ಕಂಡೂ ಕಾಣದಂತೆ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ. ಎಲ್ಲೆಲ್ಲಿ ಈ ಅಕ್ರಮ ನಡೆಯುತ್ತಿದೆಯೋ ಅಲ್ಲೆಲ್ಲಾ ತಕ್ಷಣವೇ ರೇಡ್ ಮಾಡಿ, ದಂಧೆ ನಡೆಸುವವರ ಮೇಲೆ ಕ್ರಮ ಕೈಗೊಂಡು ಸೀಜ್ ಮಾಡಬೇಕು.

-ಪರಶುರಾಮ ಚಲವಾದಿ, ಭೀಮ ಸರ್ಕಾರ ಸಂಘಟನೆ ಅಧ್ಯಕ್ಷ