ಮಂಡ್ಯ ನಗರದಲ್ಲಿ ದಿನೇ ದಿನೇ ಅನಧಿಕೃತ ಪಾರ್ಕಿಂಗ್ ಹಾವಳಿ ಹೆಚ್ಚಾಗುತ್ತಿದೆ. ಸಿಕ್ಕಸಿಕ್ಕ ಜಾಗದಲ್ಲೆಲ್ಲಾ ದ್ವಿಚಕ್ರ ವಾಹನಗಳು, ಕಾರುಗಳನ್ನು ನಿಲ್ಲಿಸಿ ಹೋಗುತ್ತಿರುವುದು ಮಾಮೂಲಾಗಿದೆ. ಇದಕ್ಕೆ ಯಾರೊಬ್ಬರೂ ಕಡಿವಾಣ ಹಾಕುತ್ತಿಲ್ಲ. ಅನಧಿಕೃತ ಪಾರ್ಕಿಂಗ್‌ನಿಂದ ಸುಗಮ ಸಂಚಾರಕ್ಕೆ ಕಿರಿಕಿರಿಯಾಗುತ್ತಿದ್ದರೂ ಸುಧಾರಣೆಗೆ ಮುಂದಾಗದ ಪೊಲೀಸ್ ಇಲಾಖೆ ಮೌನ ವಹಿಸಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯನಗರದಲ್ಲಿ ದಿನೇ ದಿನೇ ಅನಧಿಕೃತ ಪಾರ್ಕಿಂಗ್ ಹಾವಳಿ ಹೆಚ್ಚಾಗುತ್ತಿದೆ. ಸಿಕ್ಕಸಿಕ್ಕ ಜಾಗದಲ್ಲೆಲ್ಲಾ ದ್ವಿಚಕ್ರ ವಾಹನಗಳು, ಕಾರುಗಳನ್ನು ನಿಲ್ಲಿಸಿ ಹೋಗುತ್ತಿರುವುದು ಮಾಮೂಲಾಗಿದೆ. ಇದಕ್ಕೆ ಯಾರೊಬ್ಬರೂ ಕಡಿವಾಣ ಹಾಕುತ್ತಿಲ್ಲ. ಅನಧಿಕೃತ ಪಾರ್ಕಿಂಗ್‌ನಿಂದ ಸುಗಮ ಸಂಚಾರಕ್ಕೆ ಕಿರಿಕಿರಿಯಾಗುತ್ತಿದ್ದರೂ ಸುಧಾರಣೆಗೆ ಮುಂದಾಗದ ಪೊಲೀಸ್ ಇಲಾಖೆ ಮೌನ ವಹಿಸಿದೆ.
ನಗರದ ಪಶ್ಚಿಮ ಪೊಲೀಸ್ ಠಾಣೆ ಪಕ್ಕದ ರಸ್ತೆ, ಕೆ.ಆರ್.ರಸ್ತೆ, ವಿವೇಕಾನಂದ ರಸ್ತೆ, ಸುಭಾಷ್‌ನಗರ, ಜಿಲ್ಲಾಧಿಕಾರಿ ಕಚೇರಿ, ನಗರಸಭೆ ಆವರಣ, ಮುನ್ಸಿಪಲ್ ಕಾಲೇಜು, ಸಿಟಿಕ್ಲಬ್ ಮುಂಭಾಗ, ಮಹಾವೀರ ಸರ್ಕಲ್ ಎದುರಿನ ಟೀ ಅಂಗಡಿ ಬಳಿ, ಆಸ್ಪತ್ರೆ ರಸ್ತೆ, ಕ್ರೀಡಾಂಗಣ ಪ್ರವೇಶ ದ್ವಾರದ ರಸ್ತೆ ಸೇರಿದಂತೆ ಇತರೆಡೆಗಳಲ್ಲಿ ಬೆಳಗ್ಗೆಯಿಂದಲೇ ನೂರಾರು ದ್ವಿಚಕ್ರವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಕಾರುಗಳೂ ನಿಲುಗಡೆಯಾಗುವುದು ಸಾಮಾನ್ಯವಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ವಾಹನಗಳು ನಿಂತಲ್ಲೇ ನಿಂತಿರುತ್ತವೆ. ಸಂಜೆಯಾದ ಬಳಿಕ ಒಂದೊಂದೇ ವಾಹನಗಳು ನಿರ್ಗಮಿಸುತ್ತವೆ.ಮರದ ನೆರಳು, ಸುರಕ್ಷಿತ ಸ್ಥಳಗಳ ಆಯ್ಕೆ:
ಬೆಂಗಳೂರು, ಮೈಸೂರು ಸೇರಿದಂತೆ ಜಿಲ್ಲೆಯ ವಿವಿಧೆಡೆಗೆ ಕೆಲಸಕ್ಕೆ ತೆರಳುವವರು ವಾಹನ ನಿಲುಗಡೆಗೆ ಸೂಕ್ತ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮರದ ನೆರಳಿರುವ, ಸುರಕ್ಷತೆ ಇರುವ ಜಾಗಗಳನ್ನು ನೋಡಿ ವಾಹನಗಳನ್ನು ನಿಲ್ಲಿಸಿ ಹೊರಟುಹೋಗುತ್ತಿದ್ದಾರೆ. ಕಾರುಗಳನ್ನು ಕೂಡ ರಸ್ತೆ ಪಕ್ಕದಲ್ಲಿ ಸಾಲಾಗಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ರಸ್ತೆಗಳು ಕಿರಿದಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದರೂ ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.ಬಸ್, ರೈಲು ನಿಲ್ದಾಣಕ್ಕೆ ಹತ್ತಿರದ ಜಾಗಗಳು:
ರೈಲು ನಿಲ್ದಾಣ, ಬಸ್ ನಿಲ್ದಾಣಗಳಿಗೆ ಹತ್ತಿರವಾಗುವ ಜಾಗಗಳನ್ನು ನೋಡಿಕೊಂಡೇ ಜನರು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ರೈಲು ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ದುಡ್ಡು ಕೊಟ್ಟು ವಾಹನಗಳನ್ನು ನಿಲ್ಲಿಸಲು ಬಯಸದವರು ಅಶೋಕನಗರ ಮೂರನೇ ಕ್ರಾಸ್ ಸೇರಿದಂತೆ ಬಡಾವಣೆಯ ವಿವಿಧ ರಸ್ತೆಗಳು, ಆಸ್ಪತ್ರೆ ರಸ್ತೆ, ವಿವೇಕಾನಂದ ರಸ್ತೆ, ವಿ.ವಿ.ರಸ್ತೆ ಸೇರಿದಂತೆ ಇತರೆಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದರೆ, ಬಸ್ ನಿಲ್ದಾಣಕ್ಕೆ ತೆರಳುವವರು ಸುಭಾಷ್‌ನಗರ ಒಂದನೇ ಕ್ರಾಸ್, ಪಶ್ಚಿಮ ಪೊಲೀಸ್ ಠಾಣೆ ಪಕ್ಕದ ರಸ್ತೆ, ಆರ್.ಪಿ.ರಸ್ತೆ, ಕ್ರೀಡಾಂಗಣದ ತಿರುವಿನ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ.ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ನೋಡಿಕೊಂಡು ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಶಿಸ್ತುಬದ್ಧವಾಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡುವಲ್ಲೂ ಪೊಲೀಸ್ ಇಲಾಖೆ ಮೌನ ವಹಿಸಿದೆ. ಹೀಗಾಗಿ ಅನಧಿಕೃತ ಪಾರ್ಕಿಂಗ್‌ಗಳು ನಾಯಿಕೊಡೆಗಳಂತೆ ಮೇಲೇಳುತ್ತಲೇ ಇವೆ.
ಪಾದಚಾರಿಗಳು, ವಿದ್ಯಾರ್ಥಿಗಳಿಗೆ ತೊಂದರೆ:ಆಸ್ಪತ್ರೆ ರಸ್ತೆಯಲ್ಲಿ ದ್ವಿಚಕ್ರವಾಹನಗಳ ಜೊತೆಗೆ ಖಾಸಗಿ ಆಸ್ಪತ್ರೆಗಳ ಆಂಬ್ಯುಲೆನ್ಸ್‌ಗಳೂ ಕೂಡ ಸಾಲುಗಟ್ಟಿ ನಿಲ್ಲುತ್ತಿವೆ. ವಿವೇಕಾನಂದ ರಸ್ತೆಯಲ್ಲಿ ಲಾರಿಗಳು, ವಾಹನಗಳು, ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿರುವುದರಿಂದ ಅಪಘಾತವಾಗುವ ಸಾಧ್ಯತೆಗಳು ಹೆಚ್ಚಿವೆ. ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ನಿಲುಗಡೆಯಾಗುತ್ತಿರುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಓಡಾಡುವುದಕ್ಕೆ ತೀವ್ರ ಅನಾನುಕೂಲ ಉಂಟಾಗಿದೆ.
ಪೊಲೀಸ್ ಇಲಾಖೆಯಿಂದ ಕ್ರಮವಿಲ್ಲ:ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದ್ದರೂ ಪೊಲೀಸರು ಸುಧಾರಣೆಗೆ ಯಾವುದೇ ಕ್ರಮವನ್ನೂ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಇಂತಹ ಅನಧಿಕೃತ ನಿಲುಗಡೆಗಳನ್ನು ತಡೆಯುವುದಕ್ಕೆ ಪೊಲೀಸ್ ಇಲಾಖೆ ತುರ್ತು ಕ್ರಮ ವಹಿಸಬೇಕಿದೆ. ಟೋಯಿಂಗ್ ವಾಹನಗಳ ಮೂಲಕ ಅನಧಿಕೃತ ಪಾರ್ಕಿಂಗ್‌ನಲ್ಲಿರುವ ವಾಹನಗಳನ್ನು ಹೊತ್ತೊಯ್ಯಬೇಕು. ಪಾರ್ಕಿಂಗ್ ವ್ಯವಸ್ಥೆಯಲ್ಲಿ ಶಿಸ್ತನ್ನು ಮೊದಲು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ಹಾಕುವುದಕ್ಕೆ ತೋರುವ ಆಸಕ್ತಿಯನ್ನು ಸಂಚಾರಿ ಪೊಲೀಸರು ಅನಧಿಕೃತ ಪಾರ್ಕಿಂಗ್ ತಡೆಯತ್ತಲೂ ತೋರುವುದು ಅವಶ್ಯಕವಾಗಿದೆ.ನಗರದೊಳಗೆ ಅನಧಿಕೃತ ಪಾರ್ಕಿಂಗ್ ಹಾವಳಿ ತೀವ್ರ ಹೆಚ್ಚಿದೆ. ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಜನರು ಹೋಗುತ್ತಿದ್ದಾರೆ. ಇದು ವಾಹನಗಳ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಓಡಾಟಕ್ಕೂ ತೊಂದರೆಯಾಗಿದೆ. ಸಂಚಾರಿ ಪೊಲೀಸರು ಇತ್ತ ದೃಷ್ಟಿಹರಿಸಿ ಸುಧಾರಣೆ ತರಬೇಕಿದೆ.
- ಸಿದ್ದರಾಜು, ಹೊಸಹಳ್ಳಿ, ಮಂಡ್ಯ