ಸಾರಾಂಶ
ಹಳಿಯಾಳ: ಶಿರೂರು ಮತ್ತು ವಯನಾಡ್ ಘಟನೆಗಳು ಮರುಕಳಿಸುವ ಮುನ್ನವೇ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ಮತ್ತು ತೋಟಗಳನ್ನು ತೆರವುಗೊಳಿಸಬೇಕು ಎಂದು ತಾಲೂಕು ಕರವೇ ಘಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಶುಕ್ರವಾರ ಹಳಿಯಾಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಹಾಗೂ ಹಳಿಯಾಳ ಅರಣ್ಯ ವಿಭಾಗ ಮುಖ್ಯ ಕಚೇರಿಗೆ ತೆರಳಿ ಡಿಸಿಎಫ್ ಮಂಜುನಾಥ ಕೆ.ಸಿ. ಅವರಿಗೆ ಮನವಿ ಸಲ್ಲಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಶಿರೂರು ಮತ್ತು ವಯನಾಡನಲ್ಲಿ ನಡೆದ ಎರಡು ಘಟನೆಗಳು ಸರ್ಕಾರದ ಜತೆಯಲ್ಲಿ ನಾಗರಿಕ ಜಗತ್ತಿಗೂ ಎಚ್ಚರಿಕೆಯ ಸಂದೇಶವಾಗಿವೆ. ಹಳಿಯಾಳ ವಿಧಾನಸಭಾ ಕ್ಷೇತ್ರ ದಟ್ಟ ಅರಣ್ಯಕ್ಕೂ ಹೆಸರಾದಷ್ಟೇ ಅದರ ಒತ್ತುವರಿಗೂ ಕುಖ್ಯಾತಿಗೊಳಗಾಗಿದೆ. ಅದಕ್ಕಾಗಿ ನಾವು ಮತ್ತು ನಮ್ಮ ನಂತರದ ತಲೆಮಾರುಗಳು ಹಾಗೂ ಪ್ರಾಣಿ, ಪಕ್ಷಿಗಳ ಹಿತದೃಷ್ಟಿಯಿಂದ ಅರಣ್ಯ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾದ ಅವಶ್ಯಕತೆಯಿದೆ.
ಹಳಿಯಾಳ ವಿಧಾನಸಭಾ ಕ್ಷೇತ್ರದುದ್ದಕ್ಕೂ ಎಲ್ಲೆಂದರಲ್ಲಿ ಅನಧಿಕೃತ ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೋಟೆಲ್‌ಗಳು, ತೋಟಗಳು ತಲೆಯೆತ್ತಿವೆ. ಇವುಗಳನ್ನು ನಿರ್ಮಿಸುವುದಕ್ಕಾಗಿ ಸಂಬಂಧಪಟ್ಟವರು ಬಹಳ ದೊಡ್ಡ ಪ್ರಮಾಣದಲ್ಲಿ ಅರಣ್ಯವನ್ನು ನಾಶ ಮಾಡಿದ್ದಾರೆ. ಅದರ ಪರಿಣಾಮ ಭೂ ಸವಳಿಕೆ, ಭೂ ಕುಸಿತ, ಗುಡ್ಡ ಕುಸಿತ ಮತ್ತು ವನ್ಯಜೀವಿಗಳ ನಾಶ ಮತ್ತು ವಲಸೆ ಹಾಗೂ ಅರಣ್ಯ ನಾಶದಂತಹ ಅವಘಡಗಳು ಸಂಭವಿಸುತ್ತಿವೆ ಎಂದರು.ತಾಲೂಕು ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷ ವಿನೋದ ದೊಡ್ಮಣಿ, ಚಂದ್ರಕಾಂತ ದುರ್ವೆ, ಕಾರ್ಯದರ್ಶಿ ಮಹೇಶ್ ಆನೆಗುಂದಿ, ಸುರೇಶ ಕೊಕಿತಕರ, ಸುಧಾಕರ ಕುಂಬಾರ, ಪರಶುರಾಮ ಶಹಾಪೂರಕರ, ನಾಗೇಶ ಹೆಗಡೆ, ಲಕ್ಷ್ಮಣ ಪೆಡ್ನೆಕರ್, ಆನಂದ ಮಠಪತಿ, ಈರಯ್ಯ ಹಿರೇಮಠ, ಪ್ರಭು ದೇಸಾಯಸ್ವಾಮಿ, ಕಮಲ ಸಿಕ್ವೇರಾ ಹಾಗೂ ಇತರರು ಇದ್ದರು.