ವಿಳಾಸಪೂರದಲ್ಲಿ ಅನಧಿಕೃತ ಸರಾಯಿ ಮಾರಾಟ

| Published : May 29 2024, 12:56 AM IST

ಸಾರಾಂಶ

ಬೀದರ್ ತಾಲೂಕಿನ ವಿಳಾಸಪೂರ ಗ್ರಾಮದ ಕಿರಾಣಾ ಅಂಗಡಿಗಳಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ತಾಲೂಕಿನ ವಿಳಾಸಪೂರ ಗ್ರಾಮ ಒಂದು ಚಿಕ್ಕ ಹಳ್ಳಿಯಾಗಿದ್ದು, ಇಲ್ಲಿರುವ 6-7ಕಿರಾಣಾ ಅಂಗಡಿಗಳಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟದಿಂದ ಗ್ರಾಮದ ಚಿಕ್ಕ ಮಕ್ಕಳು ಸೇರಿ ಗ್ರಾಮಸ್ಥರು ಸರಾಯಿ ಚಟಕ್ಕೆ ಬಿದ್ದು ಹಾಳಾಗುತಿದ್ದಾರೆ ಹೀಗಾಗಿ ಗ್ರಾಮದಲ್ಲಿ ಸರಾಯಿ ಮಾರಾಟ ನಿಲ್ಲಿಸಿ ಎಂದು ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಬಹುತೇಕ ಗ್ರಾಮಸ್ಥರು ಕೂಲಿ ಕೆಲಸ ಮಾಡಿ, ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ತಾವು ಗಳಿಸುವ ಕೂಲಿ ಹಣ ಕುಡಿತಕ್ಕೆ ಬಳಸುತ್ತಿದ್ದು, ಅಲ್ಲದೇ ಕುಡಿದ ಅಮಲಿನಲ್ಲಿ ಹೆಂಡತಿ ಮಕ್ಕಳೆನ್ನದೇ ಎಲ್ಲರಿಗೂ ಹೊಡೆಬಡೆ ಮಾಡುವುದು ಹಾಗೂ ಕುಡಿದ ನಶೆಯಲ್ಲಿ ಚಿರಾಟ, ಅವಾಚ್ಯ ಶಬ್ಧಗಳಿಂದ ಬೈಯುವುದು ಮಾಡುತ್ತಿರುವುದರಿಂದ ಶಾಂತ ರೀತಿಯಲ್ಲಿದ್ದ ಗ್ರಾಮ ಇಂದು ಸರಾಯಿ ಮಾರಾಟದಿಂದ ಶಾಂತಿ ಕಳೆದುಕೊಳ್ಳುತ್ತಿದೆ.

ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಸರಾಯಿಯಿಂದ ಗ್ರಾಮದ ಸಂಪೂರ್ಣ ನೆಮ್ಮದಿ ಹಾಳಾಗಿದ್ದು, ಬಹುತೇಕ ಕುಡುಕರು ಸರಾಯಿ ಚಟಕ್ಕೆ ಗುಲಾಮರಾಗಿ ಅಷ್ಟಿಷ್ಟ ಇದ್ದ ಜಮೀನು ಕೂಡ ಮಾರಾಟ ಮಾಡಿಕೊಂಡು ತಮ್ಮ ಕುಟುಂಬವನ್ನು ಬಿದಿಗೆ ತಂದಿರುತ್ತಾರೆ. ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಸರಾಯಿ ಮಾರಾಟ ಮಾಡುತ್ತಿರುವ ಕಿರಾಣಾ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಾಳಾಗುತ್ತಿರುವ ಗ್ರಾಮದ ನೆಮ್ಮದಿ, ಶಾಂತಿ ಉಳಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿಳಾಸಪೂರ ಗ್ರಾಮದ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.