ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಪಟ್ಟಣದ ವಾರ್ಡ ನಂ.17ಕ್ಕೆ ಹೊಂದಿಕೊಂಡಿರುವ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯ ಪಕ್ಕದ ಚರಂಡಿ ಮೇಲೆ ನಿರ್ಮಿಸಿದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಹಿರಿಯ ವಕೀಲ ಗುರುರಾಜ ತಿಳಗೂಳ ಆಗ್ರಹಿಸಿದ್ದಾರೆ.ತಾಲೂಕಿನ ಕೆಂಭಾವಿ ಪಟ್ಟಣದ ಸರ್ವೇ ನಂ.601ರ ಜಮೀನಿಗೆ ಹೊಂದಿಕೊಂಡಿರುವ ಈ ಚರಂಡಿ ಮೇಲೆ ಖಾಸಗಿಯವರು ಅನಧಿಕೃತ ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಈ ಕುರಿತು ಕಳೆದ ನ.28ರಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗಿದ್ದು, 24 ಗಂಟೆಗಳಲ್ಲಿ ತೆರವುಗೊಳಿಸುವಂತೆ ಪ್ರಾದೇಶಿಕ ಆಯುಕ್ತರ ಲಿಖಿತ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ನಂತರ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಂಗಡಿ ತೆರವುಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರು.
ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಮತ್ತು ಯೋಜನಾ ನಿದೇರ್ಶಕರು ಪುರಸಭೆಗೆ ನಾಲ್ಕಾರು ಬಾರಿ ಸೂಚನೆ ನೀಡಿ ಅಂಡಿಗಳನ್ನು ತೆರವು ಮಾಡದಿದ್ದರೆ ಮುಖ್ಯಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದರು.ಇದ್ಯಾವುದನ್ನು ಲೆಕ್ಕಿಸದ ಪುರಸಭೆ ಅಧಿಕಾರಿಗಳು ಇಲ್ಲಿಯವರೆಗೂ ಅಂಗಡಿಗಳನ್ನು ತೆರವುಗೊಳಿಸದೆ ಮೇಲಾಧಿಕಾರಿಗಳ ಆದೇಶ ಕಡೆಗಣನೆ ಮಾಡಿದ್ದಾರೆ. ಕೂಡಲೆ ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರ ಮೇರೆಗೆ ಕ್ರಮ ಕೈಗೊಂಡು ಅಂಗಡಿ ತೆರವುಗೊಳಿಸದಿದ್ದರೆ ವಿವಿಧ ಸಂಘಟನೆಗಳ ಜೊತೆಗೂಡಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಗೂಳ ಎಚ್ಚರಿಸಿದ್ದಾರೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಇನ್ನೆರಡು ದಿನಗಳಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಚರಂಡಿ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲಾಗುವುದು.ಮಹ್ಮದ್ ಯುಸೂಫ್, ಮುಖ್ಯಾಧಿಕಾರಿ ಪುರಸಭೆ, ಕೆಂಭಾವಿ