ಶಾಲೆ ಮೈದಾನದಲ್ಲಿ ಅನಧಿಕೃತ ಮಳಿಗೆ

| Published : Feb 22 2024, 01:51 AM IST

ಸಾರಾಂಶ

ಬಿಬಿಎಂಪಿ, ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬೇಗೂರು ಶಾಳೆಯಲ್ಲಿ ಮಳಿಗೆ ನಿರ್ಮಾಣ ಕಾರ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಬಿಬಿಎಂಪಿ ಆಟದ ಮೈದಾನದ ಮುಂಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದ್ದ ಮಳಿಗೆಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರಿನಲ್ಲಿ ಅನಧಿಕೃತವಾಗಿ ಸರ್ಕಾರಿ ಶಾಲಾ ಮುಂಭಾಗದ ಆಟದ ಮೈದಾನದಲ್ಲಿ ಮಳಿಗೆ ನಿರ್ಮಿಸಲು ಮುಂದಾಗಿದ್ದನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಬಡಗಿ ನಾರಾಯಣಪ್ಪ, ಶಾಲೆಯ ಅಭಿವೃದ್ಧಿಗಾಗಿ ಮಳಿಗೆಯ ಬಾಡಿಗೆ ಹಣವನ್ನು ವಿನಿಯೋಗಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದನ್ನು ಒಪ್ಪದ ಸ್ಥಳೀಯರು ಪ್ರತಿಭಟಿನೆ ನಡೆಸಿದ್ದಾರೆ. ಬೇಗೂರು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಳಿಗೆ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

ಆಟದ ಮೈದಾನದಲ್ಲಿ ಮಳಿಗೆ ನಿರ್ಮಿಸಲು ಶಿಕ್ಷಣ ಇಲಾಖೆ ಹಾಗೂ ಬಿಬಿಎಂಪಿ, ಕಮಿಟಿ ಸದಸ್ಯರ ಒಪ್ಪಿಗೆ ಪಡೆಯದೇ ಏಕಪಕ್ಷಿಯವಾಗಿ ಮಳಿಗೆ ನಿರ್ಮಾಣ ಮಾಡಲಾಗುತ್ತಿತ್ತು ಎಂದು ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ದೂರಿನ ಅನ್ವಯ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳನ್ನು ಕಳುಹಿಸಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದ್ದ ಮಳಿಗೆ ನಿರ್ಮಾಣಕ್ಕೆ ಬ್ರೇಕ್ ಹಾಕಲಾಗಿದೆ. ಅನುಮತಿ ಪಡೆಯದೆ ಹೇಗೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಕಾರಣ ಕೇಳಿ ನೋಟಿಸ್ ನೀಡಲಾಗುವುದು.

-ವೀರೇಶ್, ಎಇಇ, ಬಿಬಿಎಂಪಿ, ಬೇಗೂರು.

ಅಕ್ರಮ ಮಳಿಗೆ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿರುವ ಜಾಗಕ್ಕೆ ಭೇಟಿ ನೀಡುತ್ತೇನೆ. ಅಲ್ಲದೆ ಈ ಘಟನೆ ಬಗ್ಗೆ ಪೂರ್ಣ ವರದಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಸೂಚಿಸಲಾಗುವುದು.

-ಕೃಷ್ಣಪ್ಪ, ಶಾಸಕ, ದಕ್ಷಿಣ ಕ್ಷೇತ್ರ.ಸರ್ಕಾರಿ ಶಾಲೆಯ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಸಹ ಈ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸವೇ ಸರಿ.

-ರಾಜು ಸ್ಥಳೀಯ ನಿವಾಸಿ.