ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿಯಾಗಿರುವ ಕೊಡಗಿನಲ್ಲಿ ಇತ್ತೀಚೆಗೆ ಪ್ರವಾಸಿಗರ ಹುಚ್ಚಾಟ ಹೆಚ್ಚುತ್ತಿದ್ದು, ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ನದಿ, ಜಲಾಶಯಗಳಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಇಲ್ಲದಂತಾಗಿದ್ದು, ಪ್ರವಾಸಿಗರು ತಮ್ಮ ವಾಹನಗಳನ್ನು ಹೊಳೆ, ನದಿಗೆ ಇಳಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ: ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿಯಾಗಿರುವ ಕೊಡಗಿನಲ್ಲಿ ಇತ್ತೀಚೆಗೆ ಪ್ರವಾಸಿಗರ ಹುಚ್ಚಾಟ ಹೆಚ್ಚುತ್ತಿದ್ದು, ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ನದಿ, ಜಲಾಶಯಗಳಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಇಲ್ಲದಂತಾಗಿದ್ದು, ಪ್ರವಾಸಿಗರು ತಮ್ಮ ವಾಹನಗಳನ್ನು ಹೊಳೆ, ನದಿಗೆ ಇಳಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ. ಹಲವರು ತಾರ್ ಜೀಪ್ ಸಾಮರ್ಥ್ಯ ಪ್ರಯೋಗ ಮಾಡಲು ಕೊಡಗಿನಲ್ಲಿ ಆಫ್ ರೋಡ್ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಅನುಮತಿ ಇಲ್ಲದೆ ಹೊಳೆಯಲ್ಲಿ ಜೀಪು ಇಳಿಸಿ ಚಾಲನೆ ಮಾಡುತ್ತಿದ್ದಾರೆ. ನದಿಯಲ್ಲಿ ಸಿಲುಕಿದ ಜೀಪ್: ಇತ್ತೀಚೆಗೆ ಮಾದಾಪುರ ಸಮೀಪದ ಹಟ್ಟಿಹೊಳೆಯಲ್ಲಿ ಅಡ್ವೆಂಚರ್ ಹೆಸರಿನಲ್ಲಿ ಪ್ರವಾಸಿಗರ ಜೀಪ್ ಹೊಳೆಯ ಮಧ್ಯೆ ಸಿಲುಕಿ ಪರದಾಡುವಂತಾಯಿತು. ನಂತರ ಮತ್ತೊಂದು ಜೀಪು ಮೂಲಕ ಅದನ್ನು ದಡಕ್ಕೆ ಸೇರಿಸಿದ ಪ್ರಸಂಗ ಕೂಡ ನಡೆದಿತ್ತು.
ಬೆಟ್ಟದಲ್ಲಿ ಬೈಕ್ ರೈಡ್: ಪ್ರವಾಸಿ ತಾಣ ಮಾಂದಲ ಪಟ್ಟಿಗೆ ಇತ್ತೀಚೆಗೆ ಬೈಕ್ ಗಳಿಗೂ ಅವಕಾಶ ನೀಡಲಾಗಿದೆ. ಆದರೆ ಇದನ್ನು ಕೆಲವು ಪ್ರವಾಸಿಗರು ಆಫ್ ರೋಡ್ ಹೆಸರಿನಲ್ಲಿ ರಸ್ತೆಯ ಮಾರ್ಗ ಇಲ್ಲದ ಬೆಟ್ಟದ ಪ್ರದೇಶದಲ್ಲಿ ಬೈಕ್ ಚಾಲನೆ ಮಾಡಿ ಸ್ಥಳೀಯರಿಂದ ತರಾಟೆಗೆ ಒಳಗಾಗುತ್ತಿದ್ದಾರೆ.ಬಾಡಿಗೆ ಬೈಕ್ ನಲ್ಲಿ ಬರುವ ಪ್ರವಾಸಿಗರು ಯಾವುದೇ ಸಂಚಾರ ನಿಯಮ ಪಾಲಿಸುತ್ತಿಲ್ಲ. ಒಂದು ಸ್ಕೂಟಿಯಲ್ಲಿ ನಾಲ್ಕು ಮಂದಿ ಪ್ರವಾಸಿಗರು ಸಂಚರಿಸುತ್ತಾರೆ.
ಜಲಪಾತಕ್ಕೆ ಇಳಿದು ಹುಚ್ಚಾಟ: ಮಳೆಗಾಲದಲ್ಲಿ ಜಲಪಾತಗಳು ಅಪಾಯಕಾರಿಯಾಗಿರುತ್ತದೆ. ಜಲಪಾತಕ್ಕೆ ಬಿದ್ದು ಹಲವರು ಮಂದಿ ಈಗಾಗಲೇ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಕೊಡಗಿನ ಶಾಂತಳ್ಳಿ ಸಮೀಪದ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಜಲಪಾತದಲ್ಲಿ ಸಿಲುಕಿದ್ದರು. ನೀರಿನ ರಭಸಕ್ಕೆ ಜಲಪಾತದಿಂದ ಹಿಂತಿರುಗಲಾಗದೇ ಪರದಾಡುತ್ತಿದ್ದರು, ಈ ಸಂದರ್ಭ ಅವರನ್ನು ರಕ್ಷಣೆ ಮಾಡಿ ಅವರಿಗೆ ದಂಡ ವಿಧಿಸಲಾಗಿತ್ತು.ಇದಲ್ಲದೇ ಮುಕ್ಕೋಡ್ಲುವಿನಲ್ಲಿರುವ ಕೋಟೆ ಅಬ್ಬಿ ಜಲಪಾತದಲ್ಲಿ ಕೂಡ ಪ್ರವಾಸಿಗರ ತಂಡ ನೀರಿನಲ್ಲಿ ಇಳಿದಿದ್ದು, ಮೋಜಿನಲ್ಲಿ ತೊಡಗಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ರೀತಿ ಪ್ರವಾಸಿ ತಾಣಗಳಲ್ಲಿ ಮದ್ಯದ ಬಾಟಲಿಗಳು ಎಸೆಯುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮಾಂದಲಪಟ್ಟಿಯಲ್ಲಿ ಪ್ರವಾಸಿಗರು ಮದ್ಯದ ಬಾಟಲಿ ಎಸೆದಿದ್ದನ್ನು ಸ್ಥಳೀಯರು ಖಂಡಿಸಿದ್ದರು.
ಹೊಳೆ ಹುಡುಕುವ ಪ್ರವಾಸಿಗರು: ವಿವಿಧ ಭಾಗಗಳಿಂದ ತಾರ್ ಜೀಪಿನಲ್ಲಿ ಬರುವ ಪ್ರವಾಸಿಗರು ಕೊಡಗಿನಲ್ಲಿ ಆಫ್ ರೋಡ್ ಹುಡುಕಿಕೊಂಡು ಬರುತ್ತಿದ್ದಾರೆ. ಸ್ಥಳೀಯರ ಬಳಿ ಈ ಬಗ್ಗೆ ವಿಚಾರಿಸಿ ಆಫ್ ರೋಡ್ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ. ಹೊಳೆಗಳಲ್ಲಿ ಕೂಡಾ ತಮ್ಮ ಜೀಪುಗಳನ್ನು ಇಳಿಸುವ ಹುಚ್ಚು ಸಾಹಸದಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಹಟ್ಟಿಹೊಳೆ, ಮಾದಾಪುರ ಮತ್ತಿತರ ಭಾಗದಲ್ಲಿರುವ ಹೊಳೆಗಳಲ್ಲಿ ಇಂತಹ ದೃಶ್ಯ ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಇದರ ಬಗ್ಗೆ ಕ್ರಮ ಕೈಗೊಳ್ಳುವವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ.ನದಿಯಲ್ಲಿ ವಾಹನಗಳನ್ನು ಇಳಿಸಿ ಹುಚ್ಚಾಟ ಮೆರೆಯುವ ಪ್ರವಾಸಿಗರಿಗೆ ಸ್ಥಳೀಯರು ತಕ್ಕ ಪಾಠ ಕಲಿಸಬೇಕು. ಇದಕ್ಕೆ ಅವಕಾಶ ನೀಡಿದವರು ಯಾರು? ಇದರ ಬಗ್ಗೆ ಸಂಬಂಧಿಸಿದವರು ಕ್ರಮ ತೆಗೆದುಕೊಳ್ಳಬೇಕು. ಪ್ರವಾಸಿಗರಿಂದ ಕೊಡಗಿಗೆ ಸಮಸ್ಯೆ ಹೆಚ್ಚಾಗುತ್ತಿದೆ. -ಅಯ್ಯಣ್ಣ, ಸ್ಥಳೀಯ ನಿವಾಸಿಪ್ರವಾಸಿಗರಿಗೆ ಕೊಡಗಿಗೆ ಯಾವುದೇ ನಿಯಮ ಇಲ್ಲ. ಒಂದು ಸ್ಕೂಟಿಯಲ್ಲಿ ನಾಲ್ಕು ಮಂದಿ ಸಂಚರಿಸುತ್ತಿದ್ದಾರೆ. ನಿಯಮ ಉಲ್ಲಂಘಿಸುತ್ತಿರುವ ಪ್ರವಾಸಿಗರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. -ಪವನ್ ಪೆಮ್ಮಯ್ಯ, ಅಧ್ಯಕ್ಷರು ಕೊಡಗು ರಕ್ಷಣಾ ವೇದಿಕೆ