ಸ್ವಚ್ಛಗೊಳಿಸದ ಗಟಾರ್, ಕಿತ್ತುಹೋಗಿರುವ ರಸ್ತೆ!

| Published : May 21 2024, 12:34 AM IST

ಸಾರಾಂಶ

ಲೋಕೋಪಯೋಗಿ ಇಲಾಖೆ ತಕ್ಷಣ ಗಮನ ಹರಿಸಿ, ಮಂಜೂರಾಗಿರುವ ಸಿಸಿ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕೆಂಬುದು ಆಗ್ರಹವಾಗಿದೆ.

ಯಲ್ಲಾಪುರ: ನಿರೀಕ್ಷೆಯಂತೆ ಮಳೆಗಾಲ ನಿಧಾನಕ್ಕೆ ಆರಂಭಗೊಂಡು ಪ್ರತಿಯೊಬ್ಬರ ಮುಖದಲ್ಲಿಯೂ ಮಂದಹಾಸ ಮೂಡಿಸಿದೆ. ಆದರೆ ಹಲವೆಡೆ ರಸ್ತೆ, ಗಟಾರ್‌ಗಳು ಹದಗೆಟ್ಟಿದ್ದರೂ ದುರಸ್ತಿಗೆ ಮುಂದಾಗುತ್ತಿಲ್ಲ.

ಸರ್ಕಾರದ ವಿವಿಧ ಇಲಾಖೆಗಳು ಮಳೆಗಾಲದ ತಯಾರಿಗಾಗಿ ಅನೇಕ ಚಟುವಟಿಕೆಗಳನ್ನು ಪ್ರತಿವರ್ಷವೂ ಕೈಗೊಂಡು, ಜತನವಾಗಿ ಮುಗಿಸುತ್ತಿದ್ದವು. ಆದರೆ, ಈ ವರ್ಷ ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯ ಎಲ್ಲ ರಸ್ತೆಗಳ ಅಂಚಿಗಿರುವ ಗಟಾರದ ಹೂಳೆತ್ತುವ ಮತ್ತು ರಸ್ತೆಯವರೆಗೆ ಬೆಳೆದ ಗಿಡ- ಗಂಟಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಮಾತ್ರ ಈವರೆಗೂ ಮಾಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಯಲ್ಲಾಪುರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೬೭ ಮತ್ತು ಯಲ್ಲಾಪುರ- ಶಿರಸಿ ರಾಜ್ಯ ಹೆದ್ದಾರಿ ೯೩ರ ಗಟಾರ್‌ಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗದಂತೆ ಸಂಪೂರ್ಣ ಎಲೆದರಕು, ಕಸ- ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಕಟ್ಟಿನಿಂತಿವೆ. ತಾಲೂಕಿನ ಬಹುತೇಕ ಎಲ್ಲ ರಸ್ತೆಗಳಂಚಿನ ಗಟಾರವನ್ನು ಸ್ವಚ್ಛಗೊಳಿಸದಿರುವ ಕಾರಣ ಎಲ್ಲೆಡೆ ಇದೀಗ ಆರಂಭಗೊಂಡ ಮಳೆಯ ನೀರು ಗಟಾರದಲ್ಲಿ ಹರಿಯದೇ, ರಸ್ತೆಯ ಮೇಲೆಯೇ ಹರಿಯುವಂತಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲೂಕಿನ ಉಮ್ಮಚಗಿಯಿಂದ ಕಾತೂರಿಗೆ ಹೋಗುವ ೨೮ ಕಿಮೀ ದೂರದ ಜಿಲ್ಲಾ ಮುಖ್ಯರಸ್ತೆಯೂ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ಬಾರದಿರುವುದು ಅಚ್ಚರಿಯ ಸಂಗತಿ. ಇನ್ನಾದರೂ ಸಂಬಂಧಿಸಿದ ಇಲಾಖೆ ಈ ಕುರಿತು ತಕ್ಷಣ ಗಮನ ಹರಿಸಿ, ರಸ್ತೆಯ ಗಟಾರ್‌ದಲ್ಲಿ ರಾಶಿ ಬಿದ್ದಿರುವ ಕಸ ಮತ್ತಿತರ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಅಗತ್ಯವಿದೆ.

ಉಮ್ಮಚಗಿಯಲ್ಲಿ ಇದೇ ರಸ್ತೆಗೆ ಹೊಂದಿಕೊಂಡಂತೆ ರಸ್ತೆಯಂಚಿಗೆ ಇರುವ ಬೃಹದಾಕಾರದ ಮರದ ನೀರು ರಸ್ತೆಯ ಮೇಲಿಳಿದು ದಾಂಬರ್‌ ರಸ್ತೆ ಕಿತ್ತುಹೋಗಬಾರದೆಂಬ ಉದ್ದೇಶದಿಂದ ೭೦ ಮೀ. ವಿಸ್ತೀರ್ಣದ ಸಿಸಿ ರಸ್ತೆಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಅದರ ಟೆಂಡರ್ ಕೂಡಾ ಕರೆಯಲಾಗಿದೆ. ಆದರೂ ಗುತ್ತಿಗೆದಾರನ ವೈಯಕ್ತಿಕ ಹಿತಾಸಕ್ತಿಯಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಕಳೆದ ೩ ತಿಂಗಳಿನಿಂದ ವಾಹನ ಸವಾರರು ಇಲ್ಲಿ ಕಿತ್ತ ಡಾಂಬರ್‌ ರಸ್ತೆಯಲ್ಲಿಯೇ ಏದುಸಿರು ಬಿಡುತ್ತ ಸಂಚರಿಸುವಂತಾಗಿರುವುದು ವಿಪರ್ಯಾಸ. ಈ ಕುರಿತಾಗಿಯೂ ಲೋಕೋಪಯೋಗಿ ಇಲಾಖೆ ತಕ್ಷಣ ಗಮನ ಹರಿಸಿ, ಮಂಜೂರಾಗಿರುವ ಸಿಸಿ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕೆಂಬುದು ಆಗ್ರಹವಾಗಿದೆ.

ಇವುಗಳ ಪ್ರಸ್ತಾಪದೊಂದಿಗೇ ತಾಲೂಕಿನ ವಿವಿಧ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ರಸ್ತೆ ಉಬ್ಬುಗಳು(ಹಂಪ್) ತೀರಾ ಅವೈಜ್ಞಾನಿಕ ಸ್ವರೂಪದಲ್ಲಿವೆ. ಅಪಘಾತ ತಡೆಗೆ ನಿರ್ಮಿಸಲಾಗಿರುವ ಈ ಹಂಪುಗಳ ಕಾರಣದಿಂದಾಗಿಯೇ ಅನೇಕ ಸವಾರರು ಅಪಘಾತಕ್ಕೀಡಾಗುತ್ತಿರುವುದು ಕೇಳಿಬಂದಿದೆ. ಈ ಹಂಪ್‌ಗಳನ್ನು ನಿರ್ಮಿಸಿದ ಇಲಾಖೆ ಇದಕ್ಕೆ ಅಗತ್ಯವಿರುವ ಗುರುತಿನ ಬಣ್ಣಗಳನ್ನೂ ಹಚ್ಚದಿರುವುದು ಇದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ತಕ್ಷಣ ಇಂತಹ ರಸ್ತೆಯ ಹಂಪುಗಳಿಗೆ ಬಣ್ಣ ಬಳಿದು, ಉಂಟಾಗಬಹುದಾದ ಅಪಘಾತಕ್ಕೆ ಕೊನೆ ಹಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆ. ಸಂಪೂರ್ಣ ಸ್ಥಗಿತ: ವರ್ಷಕ್ಕೊಮ್ಮೆ ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯ ಎಲ್ಲ ರಸ್ತೆಗಳ ಗಟಾರ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಸರಾಗವಾಗಿ ನೀರು ಹರಿಯಲು ಕೆಲಸ ಮಾಡುತ್ತಿತ್ತು. ಇತ್ತೀಚೆಗೆ ಈ ಪ್ರಕ್ರಿಯೆ ಸಂಪೂರ್ಣ ಸ್ಥಗಿತವಾಗಿದೆ. ಇನ್ನಾದರೂ ರಸ್ತೆಯಂಚಿನ ಗಟಾರ್‌ಗಳ ಸ್ವಚ್ಛತೆಯ ಬಗೆಗೆ ಇಲಾಖೆ ಆದ್ಯ ಗಮನ ಹರಿಸಬೇಕಿದೆ ಎಂದು ಉಮ್ಮಚಗಿ ಗ್ರಾಪಂ ಸದಸ್ಯ ಗ.ರಾ. ಭಟ್ಟ ಬಾಳೆಗದ್ದೆ ತಿಳಿಸಿದರು.