ಸಾರಾಂಶ
ಹಾವೇರಿ ಶಿರಸಿ ನಡುವಿನ ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಿಂದ ಆರಂಭವಾಗಿರುವ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನನುಕೂಲವಾಗಿದೆ. ರಾಡಿಯಲ್ಲಿಯೇ ವಾಹನಗಳು ಓಡಾಡಬೇಕಾಗಿದೆ. ದ್ವಿಚಕ್ರವಾಹನ ಸವಾರರಂತೂ ಸರ್ಕಸ್ ಮಾಡುತ್ತಲೆ ಶಾಪ ಹಾಕುತ್ತ ದಾರಿ ಸಾಗಿಸುವಂತಾಗಿದೆ.
ಹಾನಗಲ್ಲ: ಹಾವೇರಿ ಶಿರಸಿ ನಡುವಿನ ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಿಂದ ಆರಂಭವಾಗಿರುವ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನನುಕೂಲವಾಗಿದೆ. ಈ ಬಗ್ಗೆ ಯಾವುದೇ ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರ ದೂರಿದ್ದಾರೆ.
ಸಾಗರಮಾಲಾ ಯೋಜನೆಯಡಿ ರಸ್ತೆ ಅಗಲೀಕರಣ ಮತ್ತು ಸುಧಾರಣೆ ಕಾಮಗಾರಿ ನಡೆಯುತ್ತಿದೆ. ಈಗಂತೂ ತಿಂಗಳುಗಟ್ಟಲೆ ಮಳೆ ಸುರಿಯುತ್ತಿದ್ದು, ಸಂಚಾರಿಗಳ ಗೋಳು ಹೇಳತೀರದು. ರಾಡಿಯಲ್ಲಿಯೇ ವಾಹನಗಳು ಓಡಾಡಬೇಕಾಗಿದೆ. ದ್ವಿಚಕ್ರವಾಹನ ಸವಾರರಂತೂ ಸರ್ಕಸ್ ಮಾಡುತ್ತಲೆ ಶಾಪ ಹಾಕುತ್ತ ದಾರಿ ಸಾಗಿಸುವಂತಾಗಿದೆ. ವಾಹನಗಳ ಅಪಘಾತ, ಗುಂಡಿಗಳಲ್ಲಿ ವಾಹನ ಇಳಿದು ಸಂಚಾರಿಗಳು ಪರದಾಡುವುದು ದಿನ ನಿತ್ಯದ ರೋದನವಾಗಿದೆ. ಸಮ್ಮಸಗಿ ಗ್ರಾಮದ ಬಳಿ ಈ ರಸ್ತೆ ನಿರ್ಮಾಣದ ಪರಿಣಾಮವಾಗಿಯೇ ಗುಡ್ಡದ ಮಣ್ಣು ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಗುತ್ತಿಗೆದಾರರಿಗೆ ಸಮ್ಮಸಗಿ ಗ್ರಾಮದ ಜನರು ಈ ಸಮಸ್ಯೆ ಬಗ್ಗೆ ತಿಳಿಸಿದ ಮೇಲೆ ಜೆಸಿಬಿಯಿಂದ ಮಣ್ಣು ತೆಗೆಯುವ ಕೆಲಸ ನಡೆಯಿತು. ಆನಂತರ ಸಂಚಾರಕ್ಕೆ ಅನುಕೂಲವಾಗಿದೆ.ಶಾಲಾ ಕಾಲೇಜು ಮಕ್ಕಳನ್ನೊಳಗೊಂಡು ಸಾರ್ವಜನಿಕರು ಓಡಾಡುವ ವಾಹನವೊಂದು ಮುಗುಚಿ ಸಂಚಾರಕ್ಕೆ ತೊಂದರೆಯಾಗಿತ್ತು. ಬೇರೆ ವಾಹನದ ಸಹಾಯದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ. ಕಾಮಗಾರಿ ವಿಳಂಬ ಹಾಗೂ ಮಳೆ ಕಾರಣವಾಗಿ ಅನನುಕೂಲವಾಗಿರುವ ರಸ್ತೆ ಸರಿಪಡಿಸಬೇಕು. ವಿಳಂಬಕ್ಕೆ ಅವಕಾಶವಿಲ್ಲದಂತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.