ಸಾರಾಂಶ
ಗಜೇಂದ್ರಗಡ: ರಾಜ್ಯದ ನೆಲ, ಜಲ ಹಾಗೂ ಭೂಮಿ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲದ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಪ್ರತಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಬಾರದಂತೆ ಕಾರ್ಯಕ್ರಮ ಜಾರಿಗೆ ತರುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ ೫೦ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಕನ್ನಡ ಜ್ಯೋತಿ ಹೊತ್ತು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿರುವ ಕನ್ನಡ ರಥ ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಬಳಿ ಭಾನುವಾರ ಅದ್ಧೂರಿ ಸ್ವಾಗತ ಕೋರಿ ಮಾತನಾಡಿದರು.ಕನ್ನಡ ಕೇವಲ ಭಾಷೆಯಲ್ಲ. ತನ್ನದೆಯಾದ ನೆಲ, ಜಲ ಹಾಗೂ ಸಂಸ್ಕೃತಿ ಒಳಗೊಂಡಿದೆ. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ೫೦ವರ್ಷಪೂರ್ಣಗೊಳ್ಳುವುದರ ಜತೆಗೆ ಡಿ. ೨೦ ರಿಂದ ೨೨ನೇವರೆಗೆ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ಅಂಗವಾಗಿ ಕನ್ನಡ ಜ್ಯೋತಿ ರಥವು ೮೭ ದಿನಗಳ ಕಾಲ ರಾಜ್ಯದ ೨೪೦ ತಾಲೂಕು ಕೇಂದ್ರಗಳಲ್ಲಿ ಸಂಚರಿಸುವ ಭಾಗವಾಗಿ ಗಜೇಂದ್ರಗಡ ತಾಲೂಕಿಗೆ ಆಗಮಿಸಿದ ಕನ್ನಡ ರಥಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಅತ್ಯಂತ ಗಟ್ಟಿ ಧ್ವನಿಯಲ್ಲಿ ಮಾಡುತ್ತಾ ಬಂದಿರುವ ಸಾಹಿತ್ಯ ಪರಿಷತ್ ಕೆಲಸವು ಅನನ್ಯ ಹಾಗೂ ಅಮೋಘವಾದದ್ದು. ರಾಜ್ಯ ಸೇರಿ ಜಿಲ್ಲೆಯಲ್ಲಿ ಅನೇಕ ಅಮೂಲ್ಯ ಇತಿಹಾಸ ಹೊರ ತೆಗೆದು ಯುವ ಸಮೂಹಕ್ಕೆ ಪರಿಚಯಿಸುವ ಕೆಲಸ ಮಾಡುತ್ತ ಬಂದಿದೆ. ಶೀಘ್ರದಲ್ಲೆ ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.
ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಬಳಿ ಆಗಮಿಸಿದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ ಕೋರಿದ ಬಳಿಕ ಶಾಸಕ ಜಿ.ಎಸ್. ಪಾಟೀಲ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ, ಟಕ್ಕೇದ ದರ್ಗ ನಿಜಾಮುದ್ದೀನಶಾ ಆಶ್ರಫಿ ಮಕಾನದಾರ ಸೇರಿ ಪುರಸಭೆ ಅಧ್ಯಕ್ಷ, ಪುರಸಭೆ ಸದಸ್ಯರು, ವಿವಿಧ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಸಾಹಿತಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿ ಅನೇಕರು ಕನ್ನಡ ರಥದೊಂದಿಗೆ ಹೆಜ್ಜೆ ಹಾಕುತ್ತಾ ಬಸ್ ನಿಲ್ದಾಣ, ಕಾಲಕಾಲೇಶ್ವರ ವೃತ್ತ, ಎಪಿಎಂಸಿ ಮಾರ್ಗವಾಗಿ ರೋಣ ಪಟ್ಟಣಕ್ಕೆ ರಥ ಬಿಳ್ಕೊಟ್ಟರು.ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸಿದ್ದಪ್ಪ ಬಂಡಿ, ಎಚ್.ಎಚ್. ಸೋಂಪುರ, ಅಶೋಕ ಬಾಗಮಾರ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲಿಕರ, ಮಾಜಿ ಸದಸ್ಯ ಎಂ.ಎಸ್. ಹಡಪದ, ಎಫ್.ಎಸ್. ಕರಿದುರಗನವರ, ಬಸವರಾಜ ಹೂಗಾರ, ಸಿದ್ದಣ್ಣ ಚೋಳಿನ, ಶರಣು ಪೂಜಾರ ಸೇರಿ ತಾಪಂ ಇಒ ಬಸವರಾಜ ಬಡಿಗೇರಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಗಣೇಶ ಕೊಡಕೇರಿ, ರಾಘವೇಂದ್ರ ಮಂತಾ, ಪಿಎಸ್‌ಐ ಸೋಮಗೌಡ ಗೌಡ್ರ ಸೇರಿದಂತೆ ಇತರರು ಭಾಗವಹಿಸಿದ್ದರು.