ಕಾಂಗ್ರೆಸ್‌ನಿಂದ ಸಂವಿಧಾನ ವಿರೋಧಿ ನೀತಿ: ಸೂಳಿಭಾವಿ

| Published : Jun 24 2024, 01:34 AM IST

ಸಾರಾಂಶ

ಸಾಹಿತಿಗಳು ರಾಜಕಾರಣಿಗಳಂತೆ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ಸರಿಯಲ್ಲ. ಅದು ಸಂವಿಧಾನ ವಿರೋಧಿ ಹೇಳಿಕೆ ಆಗಿದೆ. ಈ ರೀತಿ ಹೇಳಿಕೆ ನೀಡಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ? ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಕ್ಷೇಪಿಸಿದ್ದಾರೆ.

ಗದಗ: ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಹಿಡಿದು ಭಾಷಣ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ಸಾಹಿತಿಗಳು ರಾಜಕಾರಣಿಗಳಂತೆ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ಸರಿಯಲ್ಲ. ಅದು ಸಂವಿಧಾನ ವಿರೋಧಿ ಹೇಳಿಕೆ ಆಗಿದೆ. ಈ ರೀತಿ ಹೇಳಿಕೆ ನೀಡಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೂಡ ಈ ರೀತಿಯ ಹೇಳಿಕೆಗಳನ್ನು ಸಮರ್ಥಿಸುವುದು ಮೂರ್ಖತನವಾಗಿದೆ. ಇದರಿಂದ ಕಾಂಗ್ರೆಸ್ ಸಾಂಸ್ಕೃತಿಕ ಅಧಃಪತನದನತ್ತ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನವರಿಗೆ ಸಂವಿಧಾನದ ತಿಳಿವಳಿಕೆ ಇಲ್ಲ. ಅಕಾಡೆಮಿ ಅಧ್ಯಕ್ಷರನ್ನು ಪಕ್ಷದ ಕಚೇರಿಗೆ ಕರೆಸಿ ಸಭೆ ಮಾಡುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದನ್ನು ಸಮರ್ಥಿಸಿಕೊಳ್ಳುವ ನೀವು ಸಚಿವ ಸಂಪುಟ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಕರೆಯಿರಿ ನೋಡೋಣ ಎಂದು ಸವಾಲು ಹಾಕಿದರು.

ರಾಜ್ಯದ ಪ್ರಜ್ಞಾವಂತರು, ಲೇಖಕರು, ಸಾಹಿತಿಗಳು ಎಲ್ಲ ಸಮಯದಲ್ಲಿಯೂ ತಪ್ಪು ತಿದ್ದುವ ಕೆಲಸ ಮಾಡುತ್ತಾರೆ. ಆದರೆ, ರಾಜಕೀಯ ಪಕ್ಷಗಳು ಇಂದು ಇರುತ್ತವೆ, ನಾಳೆ ಹೋಗುತ್ತವೆ ಎನ್ನುವುದನ್ನು ಡಿ.ಕೆ. ಶಿವಕುಮಾರ ಅರಿತುಕೊಳ್ಳಬೇಕು. ಸಾಹಿತಿಗಳು ವಿರೋಧ ಪಕ್ಷದವರು ಎನ್ನುವ ರೀತಿ ಆಡಳಿತ ಪಕ್ಷದವರ ಮೈ ಚರ್ಮ ದಪ್ಪವಾಗಿದೆ. ಮುತ್ಸದ್ದಿ ರಾಜಕಾರಣಿಗಳು ರಾಜ್ಯದಲ್ಲಿ ಇಲ್ಲದಂತಾಗಿದೆ. ಇಷ್ಟೆಲ್ಲ ಆದರೂ ಸಿಎಂ ಮಾತನಾಡುತ್ತಿಲ್ಲ. ಸಚಿವ ಸಂಪುಟದ ಸದಸ್ಯರಿಗೆ ಹಾಗೂ ಉಪಮುಖ್ಯಮಂತ್ರಿಗೆ ತಿಳಿವಳಿಕೆ ಹೇಳುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಮನವಿ ಪತ್ರ ನೀಡಿದರೂ ಸ್ಪಂದಿಸುತ್ತಿಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾಂಗ್ರೆಸ್ ಸಂವಿಧಾನದ ತತ್ವ ಬಿಟ್ಟು ಅಹಂಕಾರದ ಕಡೆ ಹೋಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಅಧಿಕಾರಕ್ಕಾಗಿ ಸಾಹಿತಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಿಂದೆ ಓಡಾಡುತ್ತಾರೆ ಎಂದು ರಮೇಶ್ ಬಾಬು ಹೇಳುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಸಾಹಿತಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಿಂದೆ ಓಡಾಡಿದ ಉದಾಹರಣೆ ಇದ್ದರೆ ದಾಖಲೆ ಸಮೇತ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಪರಿಸ್ಥಿತಿ ಹೀಗೆ ಮುಂದುವರಿದರೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಅಕಾಡೆಮಿಗಳನ್ನು ರಾಜಕಾರಣದ ಭಾಗವಾಗಿ ನೋಡುವುದು ನಿಲ್ಲಬೇಕು. ಸಾಹಿತಿಗಳು, ಬುದ್ಧಿವಂತರು, ಜ್ಞಾನಿಗಳು ರಾಜಕಾರಣಿಗಳಲ್ಲ. ಇವರೆಲ್ಲ ಸಂವಿಧಾನದ ಆಶಯಗಳಿಗೆ ಬದ್ಧರಾಗಿರುತ್ತಾರೆ. ಇದನ್ನು ಸಚಿವರು ಗಮನಿಸಿಕೊಳ್ಳಬೇಕು ಎಂದರು.