ಸಂವಿಧಾನ ವಿರೋಧಿ ಹೇಳಿಕೆಗಳು ಸಲ್ಲದು: ಓಬಳೇಶ

| Published : Dec 01 2024, 01:34 AM IST

ಸಾರಾಂಶ

ಪೇಜಾವರ ಶ್ರೀಗಳು ಸಂವಿಧಾನದಿಂದ ನಮಗೆ ಗೌರವ ನೀಡುತ್ತಿಲ್ಲ, ಇಂತಹ ಸಂವಿಧಾನ ನಮಗೆ ಬೇಡ ಎಂದಿದ್ದಾರೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಹ ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕೆಂಬ ಹೇಳಿದ್ದಾರೆ. ಅಲ್ಲದೇ, ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಕುರಿತು ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ಜಾಗತಿಕ ಲಿಂಗಾಯತ ಮಹಸಭಾ, ಶರಣ ಸಾಹಿತ್ಯ ಪರಿಷತ್ತು, ಜಾಗೃತ ಭಾರತ ವಿಚಾರ ವೇದಿಕೆ ತೀವ್ರವಾಗಿ ಖಂಡಿಸುತ್ತವೆ ಎಂದು ವೇದಿಕೆ ಸಂಚಾಲಕ ಕೆ.ಎ. ಓಬಳೇಶ ಹೇಳಿದ್ದಾರೆ.

- ಪೇಜಾವರ ಶ್ರೀ, ಚಂದ್ರಶೇಖರ ಶ್ರೀಗಳ ಹೇಳಿಕೆಯಿಂದ ದೇಶವಾಸಿಗಳಿಗೆ ಅವಮಾನ: ಟೀಕೆ । ಬಸವಣ್ಣ ಕುರಿತ ಯತ್ನಾಳ್‌ ಹೇಳಿಕೆಗೆ ಖಂಡನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ನ.30

ಪೇಜಾವರ ಶ್ರೀಗಳು ಸಂವಿಧಾನದಿಂದ ನಮಗೆ ಗೌರವ ನೀಡುತ್ತಿಲ್ಲ, ಇಂತಹ ಸಂವಿಧಾನ ನಮಗೆ ಬೇಡ ಎಂದಿದ್ದಾರೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಹ ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕೆಂಬ ಹೇಳಿದ್ದಾರೆ. ಅಲ್ಲದೇ, ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಕುರಿತು ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ಜಾಗತಿಕ ಲಿಂಗಾಯತ ಮಹಸಭಾ, ಶರಣ ಸಾಹಿತ್ಯ ಪರಿಷತ್ತು, ಜಾಗೃತ ಭಾರತ ವಿಚಾರ ವೇದಿಕೆ ತೀವ್ರವಾಗಿ ಖಂಡಿಸುತ್ತವೆ ಎಂದು ವೇದಿಕೆ ಸಂಚಾಲಕ ಕೆ.ಎ. ಓಬಳೇಶ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವರನ್ನು ಸಮಾನವಾಗಿ ಪರಿಗಣಿಸಿ, ಸಾವಿರಾರು ವರ್ಷಗಳಿಂದ ಸಮಾನತೆಯಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಸ್ವಾಭಿಮಾನ, ಸ್ವಾವಲಂಬನೆಯಿಂದ ಬಾಳುವಲ್ಲಿ ನಮ್ಮ ಸಂವಿಧಾನ ನೆರವಾಗಿದೆ. ಇಂತಹ ಸಂವಿಧಾನಕ್ಕೆ ಗೌರವಿಸಲೆಂದೇ ನ.26 ಅನ್ನು ದೇಶಾದ್ಯಂತ ಸಂವಿಧಾನ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂಬುದನ್ನು ಅರಿಯಬೇಕಿದೆ ಎಂದರು.

ನಾಡಿನ ಪ್ರಸಿದ್ಧ ಮಠಗಳಲ್ಲೊಂದಾದ ಪೇಜಾವರ ಪೀಠದ ಶ್ರೀಗಳು ಸಂವಿಧಾನದಿಂದ ನಮಗೆ ಗೌರವ ನೀಡುತ್ತಿಲ್ಲ. ಇಂತಹ ಸಂವಿಧಾನ ನಮಗೆ ಬೇಡವೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಮೂಲಕ ಸಂವಿಧಾನ ವಿರೋಧಿ ಮನಸ್ಥಿತಿ ಅನಾವರಣಗೊಳಿಸಿದ್ದಾರೆ. ಇದು ದೇಶವಾಸಿಗಳಿಗೆ ಮಾಡಿದ ಅವಮಾನವಾಗಿದೆ. ಗೌರವಯುತ ಸಂವಿಧಾನಕ್ಕೆ, ಸಂವಿಧಾನದಡಿ ಸ್ವಾಭಿಮಾನದಿಂದ ಬಾಳುತ್ತಿರುವ ಬಹುಸಂಖ್ಯಾತ ವರ್ಗಕ್ಕೆ ಮಾಡಿದ ಅವಮಾನ ಎಂದು ದೂರಿದರು.

ಪೇಜಾವರ ಸ್ವಾಮೀಜಿ ಅವರು ತಮಗೆ ಈ ನೆಲದ ಸಂವಿಧಾನದಿಂದ ಯಾವ ರೀತಿ ಅಗೌರವ, ಅವಮಾನ ಆಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಶ್ರೀಗಳ ಆಂತರ್ಯದ ತುಡಿತ ಈ ನೆಲದ ಬಹುಸಂಖ್ಯಾತ ವರ್ಗಕ್ಕೆ ಅರ್ಥವಾಗಬೇಕು. ಪೇಜಾವರ ಶ್ರೀಗಳ ಇಂತಹ ಹೇಳಿಕೆ ಸಂಪೂರ್ಣ ಖಂಡಿಸುತ್ತೇವೆ. ಸಂವಿಧಾನ ಮೌಲ್ಯಗಳಿಗೆ ಅಪಚಾರ ಎಸಗಿದ ಶ್ರೀಗಳು ತಕ್ಷಣ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಶ್ರೀಗಳ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಂವಿಧಾನದ ಆಶಯಗಳಿಗೆ ವಿರುದ್ಧ ನೆಲೆಯಲ್ಲಿ ಮಾತನಾಡಿದ್ದಾರೆ. ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕೆಂಬ ಹೇಳಿಕೆ ಖಂಡನೀಯ. ಧರ್ಮದ ಆಶಯಗಳ ಮೂಲಕ ಶಾಂತಿ ಸಂದೇಶ ಸಾರಬೇಕಾದ ಸ್ವಾಮಿಗಳೇ ಹೀಗೆ ಕೋಮುದ್ವೇಷಕ್ಕೆ ಪ್ರಚೋದನೆ ನೀಡುವಂಥ ಹೇಳಿಕೆ ವಿಷಾದದ ಸಂಗತಿ. ಈಗಾಗಲೇ ಶ್ರೀಗಳು ಬಹಿರಂಗ ಕ್ಷಮೆ ಕೇಳಿದ್ದಾರೆ. ಇಂತಹ ಹೇಳಿಕೆ ಮರುಕಳಿಸಿದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ ಅಗಡಿ ಮಾತನಾಡಿ, ವಿಜಯಪುರ ಕ್ಷೇತ್ರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಬಸವಣ್ಣರ ಕುರಿತು ಸಲ್ಲದ ಮಾತನಾಡಿದ್ದಾರೆ. ಕನ್ನಡ ನೆಲದ ಅಸ್ಮಿತೆ, ತನ್ನ ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿ, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 12ನೇ ಶತಮಾನದಲ್ಲೇ ನುಡಿದಂತೆ ನಡೆದ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣ. ಅವರನ್ನು ಅವಮಾನಿಸುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವ ಖಂಡಿಸುತ್ತೇವೆ. ಯತ್ನಾಳರು ತಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ದರೆ, ಕಾನೂನು ಹೋರಾಟ ನಡೆಸುತ್ತೇವೆ ಎಂದರು.

ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಸ್.ಬಿ. ರುದ್ರಗೌಡ ಗೋಪನಾಳ್, ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕುಸುಮ ಲೋಕೇಶ, ಉಪಾಧ್ಯಕ್ಷ ವಿನೋದ ಅಜಗಣ್ಣನವರ, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಶಶಿಧರ ಬಸಾಪುರ ಇತರರು ಇದ್ದರು.

- - - ಕೋಟ್‌

ದೇಶದ ಕಾನೂನಿನ ಮುಂದೆ ಯಾವುದೇ ಮಠಾಧೀಶರಾಗಲೀ, ಧಾರ್ಮಿಕ ಮುಖಂಡರಾಗಲೀ, ರಾಜಕಾರಣಿಗಳಾಗಲೀ, ಬಂಡವಾಳಶಾಹಿಗಳಾಗಲೀ, ಶ್ರೀಮಂತರಾಗಲೀ ದೊಡ್ಡವರಲ್ಲ. ಸಂವಿಧಾನ ಎಲ್ಲರಿಗೂ ಒಂದೇ ಮೌಲ್ಯ ಕಲ್ಪಿಸಿದೆ. ಸಮಾಜದ ಶಾಂತಿ, ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತೆ ಯಾರೇ ನಡೆದುಕೊಂಡರೂ ಅದನ್ನು ಸೈದ್ಧಾಂತಿಕ ನೆಲೆಯಲ್ಲಿ ನಾವು ಖಂಡಿಸುತ್ತೇವೆ. ಸಂವಿಧಾನಕ್ಕೆ ಅವಮಾನಿಸುವಂತೆ ಯಾರೇ ಹೇಳಿಕೆ ನೀಡಿದರೂ ದೇಶದ್ರೋಹದಡಿ ಬಂಧಿಸುವ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಲಿ

- ಮಹಾಂತೇಶ ಅಗಡಿ, ರಾಜ್ಯ ಕಾರ್ಯದರ್ಶಿ

- - - -30ಕೆಡಿವಿಜಿ1, 2:

ದಾವಣಗೆರೆಯಲ್ಲಿ ಶನಿವಾರ ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಕೆ.ಎ. ಓಬಳೇಶ್, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ ಅಗಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.