ಸಾರಾಂಶ
ಶಿಗ್ಗಾಂವಿ: ತಾಲೂಕಿನ ಹಿರೇಮಲ್ಲೂರು ಗ್ರಾಮದ ವಾರ್ಡ್ ನಂ. ೧ರ ಬಸವೇಶ್ವರ ನಗರದ ಮುಖ್ಯ ರಸ್ತೆಯ ಬದಿ ಚರಂಡಿ ನಿರ್ಮಾಣ ಮಾಡದಿರುವುದರಿಂದ ಸ್ಥಳೀಯರು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕಾಲುವೆ ಮೂಲಕ ನೂರಾರು ಎಕರೆ ಜಮೀನುಗಳ ಮಳೆ ನೀರು ಹರಿದು ಹೋಗುತ್ತದೆ. ಮಳೆ ಇಲ್ಲದ ಸಮಯದಲ್ಲಿ ನೀರು ನಿಂತು ದುರ್ನಾತ ಬೀರುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿಯಾಗದೆ.ಕಳೆದ ವರ್ಷದ ಮುಂಗಾರಿನ ಅತಿವೃಷ್ಟಿ ಸಮಯದಲ್ಲಿ ನೆರೆ ಹಾವಳಿ ವೀಕ್ಷಣೆಗೆ ಬಂದಿದ್ದ ಅಂದಿನ ತಹಸೀಲ್ದಾರ್ ಮತ್ತು ತಾಪಂ ಅಧಿಕಾರಿಗಳು ಸ್ಥಳೀಯವಾಗಿ ಸಮಸ್ಯೆಯನ್ನು ವೀಕ್ಷಣೆ ಮಾಡಿ ಶೀಘ್ರದಲ್ಲಿ ಚರಂಡಿ ನಿರ್ಮಾಣ ಮಾಡಲು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ಭರವಸೆ ನೀಡಿ ವರ್ಷ ಗತಿಸಿದರೂ ಚರಂಡಿ ಮಾತ್ರ ನಿರ್ಮಾಣವಾಗುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.ಮೂರು ವರ್ಷಗಳ ಹಿಂದೆ ಇಲ್ಲಿನ ಪಕ್ಕದ ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದಾಗ ಈ ರಸ್ತೆ ಗ್ರಾಪಂ ವ್ಯಾಪ್ತಿಗೆ ಒಳಪಡುವುದಿಲ್ಲ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದು ಸಬೂಬು ಹೇಳಿ ಕೈ ತೊಳೆದುಕೊಂಡರೆ ಹೊರತು ಮೇಲಧಿಕಾರಿಗಳನ್ನು ಸಂಪರ್ಕಿಸಿ ಚರಂಡಿ ನಿರ್ಮಿಸಲು ಸ್ಥಳೀಯ ಆಡಳಿತ ಅಧಿಕಾರಿಗಳು ಮುಂದಾಗಲಿಲ್ಲ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.
ಚರಂಡಿ ನಿರ್ಮಿಸಿಲ್ಲ: ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವುದರಿಂದ ತಾಪಂ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಿದರೂ ಚರಂಡಿ ನಿರ್ಮಿಸಿಲ್ಲ. ಮಳೆಗಾಲದಲ್ಲಿ ತೀವ್ರ ಸಮಸ್ಯೆಯಾಗುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯ ನಿವಾಸಿ ಅರವಿಂದ ಕರಿಗೌಡ್ರ ಆಗ್ರಹಿಸಿದರು.ಸರಿಪಡಿಸಿಲ್ಲ: ನೂರಾರು ಎಕರೆ ರೈತರ ಜಮೀನಿನ ನೀರು ಈ ಕಾಲುವೆ ಮೂಲಕ ಮುಂದೆ ಹಳ್ಳಕ್ಕೆ ಸೇರುತ್ತದೆ. ಕಳೆದ ವರ್ಷ ಅತಿವೃಷ್ಟಿಯಿಂದ ಮಳೆ ನೀರು ಹರಿಯದೆ, ಪಕ್ಕದ ಜಮೀನಿನ ಒಡ್ಡು ಒಡೆದು ಜಮೀನಿನಲ್ಲಿ ನೀರು ಹರಿದು ಬೆಳೆಗಳು ಸಂಪೂರ್ಣ ಹಾಳಾಗಿದ್ದವು. ಅಧಿಕಾರಿಗಳು ಇಲ್ಲಿನ ಅವ್ಯವಸ್ಥೆ ಗಮನಿಸಿದ್ದರೂ ಸರಿಪಡಿಸಿಲ್ಲ ಎಂದು ಪಕ್ಕದ ಜಮೀನಿನ ಮಾಲೀಕ ಬಸವಣ್ಣಯ್ಯ ಹಿರೇಮಠ ತಿಳಿಸಿದರು.