ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಸಂಸದ ಬಸವರಾಜ ಬೊಮ್ಮಾಯಿ

| Published : Apr 07 2025, 12:34 AM IST

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನಪರ ಕೆಲಸ ಮಾಡಿದೆ. ರೈತರು, ತಾಯಂದಿರು, ಎಸ್ಸಿ, ಎಸ್ಪಿ, ಒಬಿಸಿ ಜನಾಂಗಕ್ಕೆ ಯಾವಾಗಲೂ ಸಹಾಯ ಮಾಡುತ್ತ ಬಂದಿದೆ.

ಹಾವೇರಿ: ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಪ್ರಜಾಪಭುತ್ವ ಇಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ 45ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 1975ರಲ್ಲಿ ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರಿಂದ ಯಾರಿಗೂ ಸ್ವಾತಂತ್ರ್ಯ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ಶುರುವಾದ ಹೋರಾಟ ಸಂಪೂರ್ಣ ಕ್ರಾಂತಿಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಡ್ವಾಣಿಯವರು ಎಲ್ಲರೂ ನುಗ್ಗಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ 1952ರ ವರೆಗೂ ರಾಷ್ಟ್ರೀಯ ಸರ್ಕಾರ ಇತ್ತು. ಯಾವುದೇ ಪಕ್ಷದ ಸರ್ಕಾರ ಇರಲಿಲ್ಲ. ಆ ಸರ್ಕಾರದಲ್ಲಿ ಶಾಮ ಪ್ರಸಾದ್ ಮುಖರ್ಜಿ ಅವರೂ ಇದ್ದರೂ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಜತೆಗೆ ಒಪ್ಪಂದ ಮಾಡಿಕೊಂಡಿದ್ದನ್ನು ವಿರೋಧಿಸಿ ಒಂದು ದೇಶದಲ್ಲಿ ಒಬ್ಬರೇ ಪ್ರಧಾನಿ ಇರಬೇಕು. ಏಕ್ ನಿಶಾನ್ ಏಕ್ ಪ್ರಧಾನ್ ಎಂದು ಘೋಷಿಸಿ ರಾಜೀನಾಮೆ ನೀಡಿ ಹೊರಬಂದು ಹೋರಾಟ ಮಾಡಿದ ಧೀಮಂತ ನಾಯಕ ಶಾಮ ಪ್ರಸಾದ್ ಮುಖರ್ಜಿ. ಅವರಿಗಿಂತ ಮುಂಚೆ ದೀನ್ ದಯಾಳ್ ಉಪಾಧ್ಯಾಯ ಅವರು ಏಕ್ ಆತ್ಮ ಎಂಬ ಮಹಾನ್ ಉದ್ದೇಶದ ಮೂಲಕ ಈ ಸಂಸ್ಥೆಯನ್ನು ಕಟ್ಟಿದರು. ಅದರ ಮೂಲ ಧ್ಯೇಯ ಅಂತ್ಯೋದಯ ಆಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ನಮ್ಮ ಗುರಿ ಅಂತ ತಿಳಿದು ಆರಂಭಿಸಿದರು ಎಂದರು.ಕಾಂಗ್ರೆಸ್‌ನಿಂದ ಒಬಿಸಿಗೆ ಅನ್ಯಾಯ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನಪರ ಕೆಲಸ ಮಾಡಿದೆ. ರೈತರು, ತಾಯಂದಿರು, ಎಸ್ಸಿ, ಎಸ್ಪಿ, ಒಬಿಸಿ ಜನಾಂಗಕ್ಕೆ ಯಾವಾಗಲೂ ಸಹಾಯ ಮಾಡುತ್ತ ಬಂದಿದೆ. ನಮ್ಮ ಬೆನ್ನನ್ನು ನಾವು ಚಪ್ಪರಿಸಿಕೊಳ್ಳುವುದಿಲ್ಲ. ಆದರೆ, ಕಾಂಗ್ರೆಸ್ ಯಾವಾಗಲೂ ಪ್ರಚಾರ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬಿಸಿ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಪಕ್ಷ ಒಬಿಸಿಗೆ ಏನು ಮಾಡಿದ್ದಾರೆ. ರಾಜ್ಯದಲ್ಲಿ ಒಬಿಸಿ ಸಿಎಂ ಇದ್ದಾರೆ. ಒಬಿಸಿ ನಿಗಮಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವನ್ನು ಮಾಡಿದ್ದೇವೆ. ಯಾವ ಮುಖ್ಯಮಂತ್ರಿ ಇಂತಹ ಗಟ್ಟಿ ನಿರ್ಧಾರ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.ಈ ವೇಳೆ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡ ಭರತ ಬೊಮ್ಮಾಯಿ, ಭೋಜರಾಜ ಕರೂದಿ, ಮಂಜುನಾಥ ಓಲೇಕಾರ, ನಂಜುಡೇಶ ಕಳ್ಳೇರ, ಸಂತೋಷ ಆಲದಕಟ್ಟಿ ಶೋಭಾ ನಿಸ್ಸಿಮಗೌಡ್ರ, ಭಾರತಿ ಜಂಬಗಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.