ಸಾರಾಂಶ
ಬೆಳ್ತಂಗಡಿ: ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಉಜಿರೆ ಗ್ರಾಮದ ಅತ್ತಾಜೆ ಕೇಶವ ಭಟ್ ಮತ್ತು ಅವರ ಅವಿಭಕ್ತ ಕುಟುಂಬಕ್ಕೆ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆಯ ಸಂಚಾಲಕ ಯು. ಎಸ್. ವಿಶ್ವೇಶ್ವರ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಂದೆ ದಿ. ರಾಮಕೃಷ್ಣ ಭಟ್ ಮತ್ತು ತಾಯಿ ಪದ್ಮಾವತಿ ಅಮ್ಮನವರ ಮಾರ್ಗದರ್ಶನದಂತೆ ಅತ್ತಾಜೆ ಕುಟುಂಬದವರು ಉಜಿರೆಯ ಆಸುಪಾಸಿನ ಕ್ಷೇತ್ರಗಳಲ್ಲಿ ಜನಸಾಮಾನ್ಯರೊಂದಿಗೆ ಬೆರೆತು ಜನಸೇವೆ ಮಾಡುತ್ತ ಬಂದಿದ್ದಾರೆ. ತಾಯಿ ಪದ್ಮಾವತಿ ಅಮ್ಮ ಮತ್ತು ಸೋದರರಾದ ಅತ್ತಾಜೆ ಕೇಶವ ಭಟ್, ಶ್ಯಾಮ ಭಟ್, ಶಂಕರ ಭಟ್ ಮತ್ತು ಈಶ್ವರ ಭಟ್ ಮತ್ತು ಮನೆಮಂದಿಯವ ಸಾಮಾಜಿಕ ಸೇವೆಗಳನ್ನು ಗುರುತಿಸಿ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ಅತ್ತಾಜೆ ಕುಟುಂಬ ಸದಸ್ಯರು ಮಹಾರಕ್ತದಾನಿಗಳಾಗಿರುವುದು ಇವರ ನಿಸ್ವಾರ್ಥ ಸೇವೆಯ ದ್ಯೋತಕವಾಗಿದೆ. ಕೇಶವ ಭಟ್ 100ಕ್ಕೂ ಮಿಕ್ಕಿ, ಶ್ಯಾಮ ಭಟ್ ೪೫, ಶಂಕರ ಭಟ್ ೪೦, ಈಶ್ವರ ಭಟ್ ೫೧ ಬಾರಿ ರಕ್ತದಾನ ಮಾಡಿದ್ದಾರೆ. ಇವರ ಮಕ್ಕಳೂ ರಕ್ತದಾನಿಗಳಾಗಿರುವುದು ರಕ್ತದಾನ ಕುಟುಂಬವಾಗಿ ಸಮಾಜಕ್ಕೆ ಆದರ್ಶವಾಗಿದ್ದಾರೆ.
ನ.30ರಂದು ಶನಿವಾರ ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಂನಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.