ಸಂವಿಧಾನ ಜಾರಿಗೆ ಬರುವ ಮುಂಚೆ ದೇಶದಲ್ಲಿದ್ದ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಮತ್ತು ಮಹಿಳೆಯರ ಹಕ್ಕುಗಳ ಕೊರತೆಯನ್ನು ಸ್ಮರಿಸುವ ಮೂಲಕ, ಸಂವಿಧಾನವು ನಮಗೆ ನೀಡಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳ ಮಹತ್ವವನ್ನು ಅರಿತುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸಂವಿಧಾನ ಜಾರಿಗೆ ಬರುವ ಮುಂಚೆ ದೇಶದಲ್ಲಿದ್ದ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಮತ್ತು ಮಹಿಳೆಯರ ಹಕ್ಕುಗಳ ಕೊರತೆಯನ್ನು ಸ್ಮರಿಸುವ ಮೂಲಕ, ಸಂವಿಧಾನವು ನಮಗೆ ನೀಡಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳ ಮಹತ್ವವನ್ನು ಅರಿತುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.

ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗುರುವಾರ ಮಾತನಾಡಿ, ಸಂವಿಧಾನ ಜಾರಿಗೆ ಬರುವ ಮೊದಲು ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಸಾಮಾನ್ಯವಾಗಿತ್ತು, ಇಂದು ಅದು ಸಂವಿಧಾನದ ಮೂಲಕ ಶಿಕ್ಷಾರ್ಹ ಅಪರಾಧವಾಗಿದೆ. ಶಿಕ್ಷಣ ಪಡೆಯುವುದು ಇಂದು ಮಕ್ಕಳ ಹಕ್ಕಾಗಿದ್ದು, ಹಿಂದೆ ಅದು ಸುಲಭವಾಗಿರಲಿಲ್ಲ. ಹಾಗೆಯೇ ಸತಿಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಮತ್ತು ವಿಧವೆಯರ ಮರುಮದುವೆಗೆ ಇದ್ದ ನಿರ್ಬಂಧಗಳಂತಹ ಇಯರೆ ಹಲವಾರು ಅಸಮಾನತೆಗಳು ಅಂದಿದ್ದವು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಹಲವು ಗಣ್ಯರು, ತಜ್ಞರು ಹಾಗೂ ಸ್ವಾತಂತ್ರ‍್ಯ ಹೋರಾಟಗಾರರು ಸುಮಾರು ಎರಡು ವರ್ಷ, 11 ತಿಂಗಳು, 18 ದಿನಗಳ ಕಾಲ ಶ್ರಮಿಸಿ ಸಂವಿಧಾನವನ್ನು ರಚಿಸಿದರು. ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಕರ್ನಾಟಕದ ಬಿ.ಎನ್.ರಾವ್, ನಿಜಲಿಂಗಪ್ಪ, ಚೆನ್ನಯ್ಯ ಸೇರಿದಂತೆ ಹಲವು ಗಣ್ಯರ ಕೊಡುಗೆಯನ್ನೂ ಜಿಲ್ಲಾಧಿಕಾರಿಗಳು ಸ್ಮರಿಸಿದರು.

ಭಾರತೀಯ ಸಂವಿಧಾನವು ಕೇವಲ ದಾಖಲೆಯಲ್ಲ, ಅದೊಂದು ಜೀವಂತ ದಾಖಲೆಯಾಗಿದೆ. ಹಲವಾರು ದೇಶಗಳು ನಮ್ಮ ಸಂವಿಧಾನದ ತತ್ವಗಳನ್ನು ಅನುಸರಿಸುತ್ತಿವೆ. ಸಾವಿರಾರು ಭಾಷೆಗಳು, ನೂರಾರು ಧರ್ಮಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳ ನಡುವೆಯೂ ನಾವೆಲ್ಲರೂ ಭಾರತೀಯರು ಎಂಬ ಏಕತಾ ಭಾವನೆಯನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಗೊಳಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಪ್ರತಿದಿನ ಸ್ಮರಿಸಿ, ಗೌರವಿಸಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.

ವಿಶೇಷ ಉಪನ್ಯಾಸಕರಾಗಿ ಅಸ್ಸಂ ಗುವಾಹಟ್ಟಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿಶಾಂತ್ರಿ ಕುಲಪತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಸ್ಥಾಪಕ ಪ್ರೊ.ಡಾ.ಜೆ.ಎಸ್.ಪಾಟೀಲ್ ಅವರು ಮಾತನಾಡಿ, ನಮ್ಮ ದೇಶದಲ್ಲಿ ಮೊಘಲರು ಹಾಗೂ ಅದಕ್ಕೂ ಹಿಂದೆ ವಿವಿಧ ರಾಜರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ದೇಶವು ಭಾರತ ಎಂಬ ರೀತಿಯಲ್ಲಿತ್ತು. ನಂತರ ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ದಾಳಿ ಮಾಡಿ ಬಂದ ಬಳಿಕ ದೇಶವು ಹರಿದು ಹಂಚಿಹೋಗಿ ಸುಮಾರು 500ಕ್ಕೂ ಹೆಚ್ಚು ಸಣ್ಣ-ಪುಟ್ಟ ಸಂಸ್ಥಾನಗಳಾಗಿ, ಕೆಲವು ಬ್ರಿಟಿಷ್ ಡೊಮಿನಿಯನ್‌ಗಳಾಗಿ ಹಾಗೂ ಚಿಕ್ಕಪುಟ್ಟ ಸಂಸ್ಥಾನಗಳಾಗಿ ವಿಭಜನೆಗೊಂಡಿತು. ಸುಮಾರು 300 ವರ್ಷಗಳ ಕಾಲ ದೇಶವು ಅನಾಥ ಸಮಾಜದಂತೆ ಇದ್ದುದನ್ನು ಕಾಣಬಹುದಾಗಿದೆ ಎಂದರು.

ಸಂವಿಧಾನ ಸಭೆಯಲ್ಲಿ ಪ್ರತಿಯೊಂದು ವಿಧಿ (ಆರ್ಟಿಕಲ್) ಮತ್ತು ಪರಿಚ್ಛೇದದ ಕುರಿತು ಚರ್ಚೆಗಳು ನಡೆಯುವಾಗ, ಸಾಂಪ್ರದಾಯವಾದಿಗಳು ಸೇರಿದಂತೆ ಹಲವರಿಂದ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿದ್ದವು. ಅಂತಹ ಸಂದರ್ಭಗಳಲ್ಲೂ ಅಂಬೇಡ್ಕರ್ ಅವರು ಅತ್ಯಂತ ಶಾಂತ ಮನಸ್ಸು, ದೃಢತೆ ಮತ್ತು ನಿಖರತೆಯಿಂದ ಉತ್ತರ ನೀಡುತ್ತಿದ್ದರು. ಅಂಬೇಡ್ಕರ್ ಕಾನೂನು ಪಂಡಿತರು ಮಾತ್ರವಲ್ಲದೆ ಅವರು ಸಂಸ್ಕೃತ ಸೇರಿದಂತೆ ಹತ್ತು ಹಲವು ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿ ದ್ದರು. ವೈವಿಧ್ಯತೆ ಮತ್ತು ಭಿನ್ನತೆಗಳ ನಡುವೆಯೂ ದೇಶದಲ್ಲಿ ಏಕತೆಯನ್ನು ಸಾಧಿಸಲು ಯಾವ ರೀತಿಯ ಕಾನೂನಾತ್ಮಕ ಅಂಶಗಳು ಅಗತ್ಯ ಎಂಬುದನ್ನು ಅವರು ಪರಿಣಾಮಕಾರಿಯಾಗಿ ಮಂಡಿಸಿದರು ಎಂದರು.

ಸುಮಾರು ಎರಡೂವರೆ ವರ್ಷಗಳ ಕಾಲ ನಡೆದ ಸಂವಿಧಾನ ಸಭೆಯ ಚರ್ಚೆಗಳು ಒಂದು ರೀತಿಯಲ್ಲಿ ಡಾ.ಅಂಬೇಡ್ಕರ್ ಅವರ ಏಕವ್ಯಕ್ತಿ ಸಂವಾದದಂತಿದ್ದವು ಸಂವಿಧಾನ ಸಭೆಯಲ್ಲಿ ಅವರು ಒಂದು ದೈತ್ಯ ಹಾಗೂ ದಿವ್ಯ ಶಕ್ತಿಯಾಗಿ ನಿಂತು ದೇಶಕ್ಕೆ ಸಂವಿಧಾನ ನೀಡುವ ಮಹತ್ವದ ಕಾರ್ಯವನ್ನು ಪೂರೈಸಿದರು. ವಿಶ್ವದಲ್ಲೇ ಅತ್ಯಂತ ಉದ್ದವಾದ ಹಾಗೂ ದೀರ್ಘವಾದ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ಭಾರತದ ಸಂವಿಧಾನಕ್ಕೆ ಸಲ್ಲುತ್ತದೆ ಎಂದರು.

1947ರಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರಕಿದಾಗ, ನೂರಾರು ಜಾತಿ, ಪಂಗಡ ಮತ್ತು ಭಾಷೆಗಳಿರುವ ಸಂಕೀರ್ಣ ಸಮಾಜವನ್ನು ಒಗ್ಗೂಡಿಸಿ ಒಂದೇ ರಾಷ್ಟ್ರವಾಗಿ ಕಟ್ಟಲು ಸಾಧ್ಯವೇ ಹಾಗೂ ಪ್ರಜಾಪ್ರಭುತ್ವ ಎಷ್ಟು ವರ್ಷ ಉಳಿಯಬಹುದು ಎಂದು ವಿದೇಶಿ ಪಂಡಿತರು ಟೀಕಾ ಟಿಪ್ಪಣಿ ಮಾಡಿದ್ದರು. ಅದಕ್ಕೆ ದಿಟ್ಟ ಹಾಗೂ ಸಮರ್ಥ ಉತ್ತರ ನೀಡುವ ನಿಟ್ಟಿನಲ್ಲಿ ದೇಶದ ಘನ ಸರ್ಕಾರ ಹಾಗೂ ಸಂವಿಧಾನ ರಚನೆಯ ಮಹತ್ವದ ಹೆಜ್ಜೆ ಮೂಡಿಬಂತು ಎಂದರು.

ಬೆನೆಗಲ್ ನರಸಿಂಗ ರಾವ್ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷರಾಗಿದ್ದ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರೂ ಆಗಿದ್ದ ಬೆನೆಗಲ್ ನರಸಿಂಗ ರಾವ್ ಅವರು ಸಂವಿಧಾನದ ಒಂದು ಕರಡನ್ನು ಸಿದ್ಧಪಡಿಸಿದ್ದರು.1946ರಲ್ಲಿ ಸಂವಿಧಾನ ರಚನಾ ಸಮಿತಿ ರಚನೆಯಾಯಿತು. ವಿವಿಧ ಪ್ರಾಂತ್ಯಗಳ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ 395 ಜನ ಸದಸ್ಯರಿದ್ದರು ಎಂದರು.

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರ ಅಧಿನಿಯಮಗಳೊಂದಿಗೆ ದೇಶ ವಿಭಜನೆಯಾದ ಕಾರಣ, ಘಟನಾ ಸಮಿತಿಯನ್ನು ಪುನರ್ ರಚನೆ ಮಾಡಲಾ ಯಿತು. 1948ರಲ್ಲಿ 299 ಜನ ಸದಸ್ಯರ ಸಮಿತಿಯನ್ನು ರೂಪಿಸಲಾಯಿತು. ಇದರಲ್ಲಿ ಕೆ.ಎಂ.ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸ್ವಾತಂತ್ರ‍್ಯ ಹೋರಾಟಗಾರರು, ಉದ್ಯಮಿಗಳು ಹಾಗೂ ವಿಜ್ಞಾನಿಗಳು ಇದ್ದರು ಎಂದು ಹೇಳಿದರು.

ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾವಂತಗೇರಾ ಅವರಿಂದ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರುದ್ರಪ್ಪ ಅಂಗಡಿ, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾದ ಪವನ್ ಕಿಶೋರ್ ಪಾಟೀಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸಹಾಯಕ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಹಸೀಲ್ದಾರ್ ಸುರೇಶ್ ವರ್ಮಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹಾಲಿಂಗರಾಯ್ಯ ಬಿ., ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ತಿಮ್ಮಪ್ಪ ಬಿರಾದಾರ್, ಅದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.

ಅಸ್ಕಿಹಾಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಯಶೋಧ ಅವರು ಕಾರ್ಯಕ್ರಮದ ನಿರೂಪಿಸಿದರು. ತಹಸೀಲ್ದಾರ್ ಸುರೇಶ ವರ್ಮಾ ಅವರು ವಂದಿಸಿದರು.