ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹೆಚ್ಚುತ್ತಿರುವ ಜನಸಂಖ್ಯೆ, ಹವಾಮಾನ ವೈಪರೀತ್ಯಗಳಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಭೂತಾಯಿಯ ಮಹತ್ವ ಅರಿತು ಅದರ ರಕ್ಷಣೆಗೆ ಮುಂದಾಗುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕಿ ಸುಧಾಬಿದರಿ ಮನವಿ ಮಾಡಿದರು.ವಿಶ್ವ ಭೂಮಿ ದಿನ ಅಂಗವಾಗಿ ಭೂಮಿ ರಕ್ಷಣೆ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಮಾನವನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಭೂಮಿ ತಾಯಿಗಿದೆಯೇ ಹೊರತು ಅವನ ದುರಾಸೆಗಳನ್ನಲ್ಲ. ಭೂತಾಯಿಯ ಮಹತ್ವವನ್ನು ಅರಿಯ ಬೇಕಾಗಿರುವ ನಾವು ಅವಳನ್ನು ರಕ್ಷಿಸುವ ಕಡೆಗೂ ಗಮನಹರಿಸಬೇಕು ಎಂದರು.
ಮಿತಿಮೀರಿದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಹೆಚ್ಚುತ್ತಿರುವ ಅರಣ್ಯ ನಾಶ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಕಾಲ ಕ್ರಮೇಣ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.ಪ್ರತಿ ವರ್ಷ ಏ. 22ರಂದು ಜಗತ್ತಿನಾದ್ಯಂತ ವಿಶ್ವ ಭೂಮಿ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಹವಾಮಾನ ಬದಲಾವಣೆಯ ಬಗ್ಗೆ ತಿಳಿಯಲು ಮತ್ತು ಪ್ರಪಂಚದಾದ್ಯಂತ ಅದರ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಈ ದಿನವನ್ನು 1970 ರಿಂದ ವಿಶ್ವ ಭೂ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಮನುಷ್ಯನ ಅಗತ್ಯವನ್ನು ಪೂರೈಸಲು ಭೂಮಿ ಸಾಕಷ್ಟು ಸಂಪನ್ಮೂಲಗಳನ್ನು ನೀಡುತ್ತಿದೆ. ವೇದಕಾಲದಿಂದಲೂ ಭೂಮಿತಾಯಿ ಎನ್ನುತ್ತಾ ನಾವು ಅದರ ಮಕ್ಕಳು ಎಂದು ಭಾವಿಸುತ್ತಲೇ ಬಂದಿದ್ದೇವೆ. ಆದರೆ, ಭೂಮಿಮೇಲೆ ದೌರ್ಜನ್ಯ ನಡೆಸಿಕೊಂಡು ಬರಲಾಗುತ್ತಿದೆ ಎಂದರು.ದುರಾಸೆಯಿಂದ ಭೂಮಿ ಗರ್ಭ ಬಗೆದು ಚಿನ್ನ, ಬೆಳ್ಳಿ ಅದಿರುಗಳನ್ನು ಹೊರ ತೆಗೆಯುತ್ತಿದ್ದೇವೆ. ನೀರು ಮುಗಿಸುತ್ತಿದ್ದೇವೆ. ಭೂಮಿಯಿಂದ ಸರ್ವಸಂಗ ಪರೀ ತ್ಯಾಗ ನೀತಿಯುಕ್ತ ಬದುಕಿಗಾಗಿ ಭೂಮಿಯಿಂದ ಕ್ಷಮಾ ಗುಣವನ್ನು ಅರಿತುಕೋ ಎಂಬಂತೆ ಎಷ್ಟೇ ದೌರ್ಜನ್ಯ ನಡೆಸಿದರು ಕ್ಷಮಿಸುತ್ತಾ ಸಿಟ್ಟು ಬಂದರು ತನ್ನ ಮಡಿಲ ಮಕ್ಕಳನ್ನು ಸರ್ವನಾಶ ಮಾಡದೆ ಕ್ಷಮೆಯಾಧರಿತ್ರಿ ಎನಿಸಿಕೊಂಡಿದ್ದಾಳೆ. ಅಂತಹ ಕ್ಷಮಯಾಧರಿತ್ರಿಯ ಸ್ಮರಣೆಗೆ ಈ ದಿನವನ್ನು ಮುಡಿಪಾಗಿ ಇಡಲಾಗಿದೆ ಎಂದರು.
ನಾವೆಲ್ಲರೂ ಭೂಮಿ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕಾಗಿದೆ. ಭೂಮಿಯಲ್ಲಿ ಮಿಲಿಯನ್ ಜನಸಂಖ್ಯೆ ವಾಸಿಸುತ್ತಿದ್ದು, ಇದರಿಂದ ಇತ್ತೀಚಿನ ದಿನಗಳಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಜೊತೆಗೆ ಅಂತರ್ಜಲ ಕುಸಿದಿದೆ. ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕಾಗಿದೆ ಎಂದರು.ಮರಗಳನ್ನು ಕಡಿಯುವ ಬದಲು ಹೆಚ್ಚು ಗಿಡಗಳನ್ನು ನೆಟ್ಟಿ ಮರ ಬೆಳೆಸುವುದರಿಂದ ಸಕಾಲಕ್ಕೆ ಮಳೆಯಾಗಿ ಸಾಕಷ್ಟು ಅನುಕೂಲವಾಗುತ್ತದೆ. ಮಳೆ ಸಮೃದ್ಧಿಯಾಗಿ ಆಗಿ ಭೂಮಿ ತಂಪಾಗಿದ್ದರೆ ಭೂಮಿ ಮೇಲೆ ವಾಸಿಸುವ ಸಕಲ ಜೀವಿಗಳು ತಂಪಾಗಿರುತ್ತವೆ. ಆದ್ದರಿಂದ ಮಾನವರಾದ ನಾವು ಪರಿಸರ ಉಳಿಸಿಕೊಂಡು ಸಮಾಜ ಸ್ವಾಸ್ಥ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಈ ವರ್ಷದ ಧ್ಯೇಯ ವಾಕ್ಯ ನಮ್ಮ ಶಕ್ತಿ ನಮ್ಮ ಭೂ ಗ್ರಹ ಎಂಬುದಾಗಿದೆ. ಗಿಡಮರಗಳನ್ನು ಹೆಚ್ಚು ಬೆಳೆಸುತ್ತಾ ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ನವೀಕರಿಸಬಹುದಾದ ಸಂಪನ್ಮೂಲಗಳನ್ನು ಹೆಚ್ಚಾಗಿ ಉಪಯೋಗಿಸಿ, ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಜೊತೆಗೆ ಸರಿಯಾದ ರೀತಿಯಲ್ಲಿ ತ್ಯಾಜ್ಯವನ್ನು ನಿರ್ವಹಣೆ ಮಾಡಿದ್ದಲ್ಲಿ ನಮಗೆ ಸರ್ವಸ್ವವನ್ನು ನೀಡುತ್ತಿರುವ ಭೂತಾಯಿ ಸಂರಕ್ಷಿಸುವ ಪಣವನ್ನು ತೊಡಬೇಕಿದೆ ಎಂದು ಮನವಿ ಮಾಡಿದರು.