ಸಾರಾಂಶ
ನನ್ನ ರಾಜಕೀಯ ಪ್ರವೇಶಕ್ಕೆ ಸಹಕಾರ ಸಂಘದ ಕಾರ್ಯಚಟುವಟಿಕೆಗಳೇ ಮೂಲ ತಳಪಾಯ. ಚುನಾಯಿತ ಸದಸ್ಯರು ಸಹಕಾರ ತತ್ವಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸಹಕಾರಿ ನಿಯಮಗಳ ಅರಿವಿಲ್ಲದಿದ್ದರೆ ಸಂಘದ ಕಾರ್ಯದರ್ಶಿಗಳು ನಿಮ್ಮನ್ನು ನಿಯಂತ್ರಿಸುತ್ತಾರೆ. ಕಾರ್ಯದರ್ಶಿಗಳ ಕೈಗೆ ನಿಮ್ಮ ಜುಟ್ಟು ಕೊಡಬೇಡಿ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಂಘಗಳ ಚುನಾಯಿತ ಸದಸ್ಯರು ಸಹಕಾರ ನಿಯಮಗಳ ಬಗ್ಗೆ ಅರಿತು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾರಿಗೂ ಭಯ ಪಡಬೇಕಾದ ಅಗತ್ಯವಿರುವುದಿಲ್ಲ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ತಾಲೂಕಿನ ಕೂಡಲಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾಯಿತ ಜೆಡಿಎಸ್ ಬೆಂಬಲಿತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ನಾನು ವಿಪಕ್ಷ ಶಾಸಕನಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ ಎಂದರು.
ನಾನು ತಳಮಟ್ಟದಿಂದ ರಾಜಕೀಯವಾಗಿ ಬೆಳೆದು ಬಂದವನು. ಸ್ವಗ್ರಾಮ ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕನಾಗಿ, ಡೇರಿ ನಿರ್ದೇಶಕ, ಜಿಪಂ ಸದಸ್ಯನಾಗಿ ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ಶಾಸಕನಾಗಿದ್ದೇನೆ ಎಂದು ತಿಳಿಸಿದರು.ನನ್ನ ರಾಜಕೀಯ ಪ್ರವೇಶಕ್ಕೆ ಸಹಕಾರ ಸಂಘದ ಕಾರ್ಯಚಟುವಟಿಕೆಗಳೇ ಮೂಲ ತಳಪಾಯ. ಚುನಾಯಿತ ಸದಸ್ಯರು ಸಹಕಾರ ತತ್ವಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸಹಕಾರಿ ನಿಯಮಗಳ ಅರಿವಿಲ್ಲದಿದ್ದರೆ ಸಂಘದ ಕಾರ್ಯದರ್ಶಿಗಳು ನಿಮ್ಮನ್ನು ನಿಯಂತ್ರಿಸುತ್ತಾರೆ. ಕಾರ್ಯದರ್ಶಿಗಳ ಕೈಗೆ ನಿಮ್ಮ ಜುಟ್ಟು ಕೊಡಬೇಡಿ ಎಂದು ಹೇಳಿದರು.
ಕೆಲವರು ನಿಮ್ಮ ಸೊಸೈಟಿಯ ಹಾಲನ್ನು ಗುಣಮಟ್ಟದ ಹೆಸರಿನಲ್ಲಿ ಫೇಲ್ ಮಾಡಿಸುವುದಾಗಿ ಭಯ ಪಡಿಸುವ ಅಥವಾ ರೈತರ ಹಾಲಿನ ಪೇಮೆಂಟ್ ನಿಲ್ಲಿಸುವುದಾಗಿ ಬೆದರಿಸಬಹುದು. ರೈತರ ಪೇಮೆಂಟ್ ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಲಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ನಿರ್ದೇಶಕರು ಎಚ್ಚರಿಕೆ ವಹಿಸಬೇಕು. ಹಾಲು ಉತ್ಪಾದಕರು ಉಳಿದರೆ ಮಾತ್ರ ಮನ್ಮುಲ್ ಉಳಿಯಲು ಸಾಧ್ಯ ಎಂದರು.ಈ ವೇಳೆ ಮುಖಂಡರಾದ ಕೃಷ್ಣೇಗೌಡ, ಮಂಜು, ಶಶಿ, ಶಿವರಾಂ, ಚಂದ್ರು, ಸುರೇಶ್, ಕುರುಬರಹಳ್ಳಿ ನಾಗೇಶ್ ಸೇರಿದಂತೆ ಹಲವರಿದ್ದರು.