ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಗೆ ಮೂಲಸೌಲಭ್ಯ ಕೈಗೊಳ್ಳಿ

| Published : Jan 29 2025, 01:34 AM IST

ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಗೆ ಮೂಲಸೌಲಭ್ಯ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಈ ಸಂದರ್ಭ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

- ಜಾತ್ರೆ ಯಶಸ್ಸಿಗೆ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು: ಜಿಲ್ಲಾಧಿಕಾರಿ ಸೂಚನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಈ ಸಂದರ್ಭ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದರು.

ಮಂಗಳವಾರ ಶ್ರೀಮಠದಲ್ಲಿ ನಡೆದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಚ್ಚು ಜನರು ಬರುವುದರಿಂದ ಜನರ ಆರೋಗ್ಯ ಮತ್ತು ನೈರ್ಮಲ್ಯತೆ ಕಾಪಾಡುವುದು ಬಹಳ ಮುಖ್ಯ. ಆರೋಗ್ಯ ಇಲಾಖೆಯಿಂದ ಇಲ್ಲಿಗೆ ಮೊಬೈಲ್ ತಂಡ ನಿಯೋಜಿಸಲು ಮತ್ತು ಆಂಬ್ಯುಲೆನ್ಸ್ ಇಲ್ಲಿಯೇ ಕಾಯ್ದಿರಿಸಬೇಕು. ಅಗತ್ಯ ಔಷಧ ದಾಸ್ತಾನು ಮಾಡಿಕೊಳ್ಳಲು ಸೂಚನೆ ನೀಡಿದರು.

ಕುಡಿಯುವ ನೀರು- ವಿದ್ಯುತ್‌:

ಹೆಚ್ಚು ಜನರು ಆಗಮಿಸುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹಾಗೂ ತಿಳಿಸಿ ನೈರ್ಮಲ್ಯತೆ ಕಾಪಾಡಲು ಮೊಬೈಲ್ ಶೌಚಾಲಯದ ಜೊತೆಗೆ ಇಲ್ಲಿಗೆ ಬೇಕಾದ ನೀರು ಪೂರೈಕೆ ವ್ಯವಸ್ಥೆ ಎಂಜಿನಿಯರಿಂಗ್ ವಿಭಾಗದವರು ಮಾಡಬೆಕು. ಅನಿಯಮಿತ ವಿದ್ಯುತ್ ಪೂರೈಕೆಗೆ ಹೆಚ್ಚುವರಿ ಮೊಬೈಲ್ ಟ್ರಾನ್ಸ್‌ಫಾರ್ಮರ್‌ಗಳ ದಾಸ್ತಾನು ಇಟ್ಟುಕೊಳ್ಳಬೇಕು. ವಿದ್ಯುತ್ ಪೂರೈಕೆಗೆ ಅಡಚಣೆ ಆಗಿರುವ ಗಿಡ, ಮರಗಳ ಕೊಂಬೆಗಳು ತಂತಿ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ನಿರಂತರ ವಿದ್ಯುತ್ ಪೂರೈಕೆಗಾಗಿ ಎಷ್ಟು ಕೆವಿ ವಿದ್ಯುತ್ ಪೂರೈಕೆ ಅವಶ್ಯಕತೆ ಇದೆ ಎಂದು ಅಂದಾಜಿಸಿಕೊಳ್ಳಲು ಮತ್ತು ಯಾವುದೇ ಅವಘಡಗಳು ಸಂಭವಿಸದಂತೆ ಎಲೆಕ್ಟ್ರಿಕಲ್ ಇನ್‌ಸ್ಪೆಪೆಕ್ಟರ್‌ಗಳಿಂದ ಜಾತ್ರಾ ಪೂರ್ವದಲ್ಲಿ ಪರೀಕ್ಷೆ ನಡೆಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಹನಗಳ ನಿಲುಗಡೆ:

ಜಾತ್ರೆ ವೇಳೆ ಬರುವ ವಾಹನಗಳನ್ನು 2 ಕಿ.ಮೀ ದೂರದಲ್ಲಿಯೇ ನಿಲುಗಡೆ ಮಾಡಲು ಸೂಚನೆ ನೀಡಲಾಗುತ್ತಿತ್ತು. ಮಠದ ಆವರಣಕ್ಕೆ ಬರಲು ಸಾಕಷ್ಟು ದೂರವಾಗುತ್ತದೆ. ಆದ್ದರಿಂದ ಹತ್ತಿರದವರೆಗೆ ವಾಹನಗಳು ಬಂದು, ನಂತರ ಮುಂದೆ ಹೋಗಿ ನಿಲುಗಡೆ ಮಾಡಲು ಪರಿಶೀಲನೆ ನಡೆಸಲಾಗುತ್ತದೆ ಎಂದು ಡಿಸಿ ತಿಳಿಸಿದರು.

ಶಾಸಕರು ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಮಾತನಾಡಿ, ವಾಲ್ಮೀಕಿ ಜಾತ್ರೆ ಸಂಪೂರ್ಣ ವ್ಯವಸ್ಥೆ ಜಿಲ್ಲಾಡಳಿತ ಮಾಡಿಕೊಡಲಿದೆ. ಜಾತ್ರೆ ಎಂಬುದು ಧಾರ್ಮಿಕ ಪ್ರಕ್ರಿಯೆ ಆಗಿದ್ದರೂ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಸಮಾಲೋಚನೆ, ಜಾಗೃತಿ ಮೂಡಿಸುವ, ಸಂಘಟನೆ ಮಾಡುವ ಉದ್ದೇಶವಿದೆ. ಭಕ್ತಾಧಿಗಳಿಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಲು ಹಾಗೂ ಜಾತ್ರೆ ಸುಗಮವಾಗಿ ನಡೆಯಲು ಎಲ್ಲರ ಸಹಕಾರ ಪ್ರಮುಖವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ನಾಡಿನಾದ್ಯಂತ ಇರುವ ಸಮುದಾಯದ ಜನರ ಸಂಘಟನೆಯೇ ಮಹರ್ಷಿ ವಾಲ್ಮೀಕಿ ಜಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.

ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಧರ್ಮದರ್ಶಿ ಶಾಂತಲಾ ರಾಜಣ್ಣ, ಮುಖಂಡರಾದ ಹೊದಿಗೆರೆ ರಮೇಶ್, ಸಂಚಾಲಕರಾದ ಶ್ರೀನಿವಾಸ ದಾಸಕರಿಯಪ್ಪ ಹಾಗೂ ಇನ್ನಿತರೆ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- - - -28ಕೆಡಿವಿಜಿ42: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿದರು.