ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯತಮಿಳು ಮಕ್ಕಳಿಗೆ ಕನ್ನಡ ಪಾಠವೇ, ಆ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆಯೇ, ಅದೂ ೧ ರಿಂದ ೯ನೇ ತರಗತಿಯವರೆಗೆ ೧೫೦ಕ್ಕೂ ಹೆಚ್ಚು ಮಕ್ಕಳು ನಿತ್ಯ ಹಾಜರಾಗುತ್ತಿದ್ದಾರೆಯೇ, ಹಾಜರಾಗುವ ಎಲ್ಲ ಮಕ್ಕಳಿಗೆ ಪ್ರತಿದಿನ ಹಾಲು-ಮೊಟ್ಟೆಯನ್ನೂ ಕೊಡಲಾಗುತ್ತಿದೆಯೇ ಎಂದು ಅಚ್ಚರಿಯಿಂದ ಕೇಳಿದರೆ ಎಲ್ಲದಕ್ಕೂ ಹೌದು ಎಂಬ ಉತ್ತರ ಸಿಗುತ್ತದೆ.
ಇದನ್ನು ನೋಡುವುದಕ್ಕೆ ಬೇರೆಲ್ಲಿಗೋ ಹೋಗಬೇಕಿಲ್ಲ. ಮಂಡ್ಯದ ತಮಿಳು ಕಾಲೋನಿ, ಆರ್‌ಟಿಓ ಸ್ಲಂಗೆ ಹೋದರೆ ಸಾಕು. ಅಲ್ಲಿ ಇದರ ಸಾಕ್ಷಾತ್ ದರ್ಶನವಾಗುತ್ತದೆ. ಅಂದಹಾಗೆ ಇಂತಹದೊಂದು ಅಪರೂಪದ ಶೈಕ್ಷಣಿಕ ಸೇವೆಯನ್ನು ನೀಡುತ್ತಿರುವವರು ಮಲಬಾರ್ ಗ್ರೂಪ್. ಹಂಗರ್ ಫ್ರೀ ವರ್ಲ್ಡ್ ಹೆಸರಿನಲ್ಲಿ ಮೈಕ್ರೋ ಲರ್ನಿಂಗ್ ಸೆಂಟರ್ ತೆರೆದು ಬಡ ಮಕ್ಕಳಿಗೆ ಉಚಿತವಾದ ಶಿಕ್ಷಣವನ್ನು ಸದ್ದಿಲ್ಲದೇ ನೀಡುತ್ತಿದ್ದಾರೆ.ತಮಿಳು ಕಾಲೋನಿಯಲ್ಲಿ ಎರಡು ಕಡೆ ತಲಾ ೪೦ ರಿಂದ ೪೫ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಕಾಳಪ್ಪ ಬಡಾವಣೆ (ಆರ್‌ಟಿಒ ಸ್ಲಂ)ಯಲ್ಲೂ ೫೦ ಮಕ್ಕಳು ಕನ್ನಡ ಪಾಠ ಕಲಿಯುತ್ತಿದ್ದಾರೆ. ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂಜೆ ೫.೩೦ ರಿಂದ ೮.೩೦ರವರೆಗೆ ಪಾಠ ಕಲಿಸಿಕೊಡಲಾಗುತ್ತಿದೆ. ಇದಕ್ಕಾಗಿ ನುರಿತ ಡಯಟ್ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರಿಗೂ ವೇತನವನ್ನು ಮಲಬಾರ್ ಗ್ರೂಪ್‌ನಿಂದಲೇ ನೀಡಲಾಗುತ್ತದೆ.
ಸೆಂಟ್ ಜೋಸೆಫ್, ರೋಟರಿ ಸಂಸ್ಥೆ ಶಾಲೆ, ಅಭಿನವ ಭಾರತಿ ಶಾಲೆ ಸೇರಿದಂತೆ ಹಲವು ಶಾಲೆಗೆ ವಿದ್ಯಾಭ್ಯಾಸಕ್ಕೆ ಹೋಗಿ ಬರುವ ಬಡ ಮಕ್ಕಳು ಸಂಜೆ ಮಲಬಾರ್ ಗ್ರೂಪ್ ನಡೆಸುವ ಲರ್ನಿಂಗ್ ಸೆಂಟರ್‌ಗೆ ಕಲಿಯಲು ಬರುತ್ತಾರೆ. ಶಾಲೆಯಲ್ಲಿ ಮಾಡಿರುವ ಪಾಠಗಳನ್ನು ಇಲ್ಲಿ ಪುನರಾವರ್ತನೆ ಮಾಡಿಕೊಟ್ಟು ಮಕ್ಕಳಿಗೆ ಅರ್ಥೈಸಿಕೊಡಲಾಗುವುದು. ಮಕ್ಕಳಿಗೆ ಅರ್ಥವಾಗದ ಪಠ್ಯ ವಿಷಯಗಳಿದ್ದರೆ ಅವುಗಳನ್ನು ಅರ್ಥೈಸಿಕೊಡುವುದು, ನೋಟ್ಸ್ ಪೂರ್ಣಗೊಳಿಸುವುದು, ಕಲಿಕೆಯತ್ತ ಅವರಿಗೆ ಆಸಕ್ತಿ ಮೂಡುವಂತೆ ಮಾಡುವುದು, ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸುವುದು ಈ ಲರ್ನಿಂಗ್ ಸೆಂಟರ್‌ನ ಮುಖ್ಯ ಉದ್ದೇಶವಾಗಿದೆ.
ಕನ್ನಡ, ವಿಜ್ಞಾನ, ಗಣಿತ ಸೇರಿದಂತೆ ಕನ್ನಡ ಮಾಧ್ಯಮದ ಎಲ್ಲಾ ವಿಷಯಗಳನ್ನೂ ಬೋಧಿಸಲಾಗುತ್ತಿದೆ. ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದಾರೆ. ಇಲ್ಲಿಗೆ ಬರುವ ಬಹುತೇಕ ಮಕ್ಕಳು ತಮಿಳರೇ ಆಗಿದ್ದಾರೆ. ಆದರೂ ಕನ್ನಡ ಕಲಿಯುವುದಕ್ಕೆ ಆಸಕ್ತಿ ತೋರಿದ್ದಾರೆ. ತಮಿಳು ಕಾಲೋನಿಯಲ್ಲಿರುವ ತಮಿಳು ಮಾಧ್ಯಮ ಶಾಲೆಯ ಮಕ್ಕಳೂ ಲರ್ನಿಂಗ್ ಸೆಂಟರ್‌ಗೆ ಬಂದು ಕಲಿಯುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಈ ಮಕ್ಕಳ ಪೋಷಕರು ತೀರಾ ಬಡವರು, ಅನಕ್ಷರಸ್ಥರು. ಮಕ್ಕಳು ಶಾಲೆಯಿಂದ ಬಂದ ನಂತರ ಓದಿನ ಕಡೆ ಆಸಕ್ತಿ ಮೂಡಿಸುವ, ಓದುವಂತೆ ಪ್ರೇರೇಪಿಸಲಾಗದ ಸ್ಥಿತಿಯಲ್ಲಿರುತ್ತಾರೆ. ಇಂತಹ ವಾತಾವರಣದಲ್ಲಿರುವ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿಕೊಡುವ ಉದ್ದೇಶದಿಂದ ಮಲಬಾರ್ ಗ್ರೂಪ್‌ನವರು ಬಡ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಲರ್ನಿಂಗ್ ಸೆಂಟರ್ ತೆರೆಯುವ ಮೂಲಕ ಆ ಪ್ರದೇಶದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ನೆರವಾಗಿದ್ದಾರೆ.ಲರ್ನಿಂಗ್ ಸೆಂಟರ್‌ಗೆ ಹಾಜರಾಗುವ ಕೊಳಚೆ ನಿವಾಸಿಗಳ ಮಕ್ಕಳೆಲ್ಲರಿಗೂ ನಿತ್ಯ ಪೌಷ್ಠಿಕಾಂಶಯುಕ್ತ ಹಾಲು ಮತ್ತು ಮೊಟ್ಟೆಯನ್ನು ನೀಡಲಾಗುತ್ತಿದೆ. ಕಲಿಕೆಯ ಜೊತೆಗೆ ಪೌಷ್ಠಿಕತೆಯನ್ನೂ ತುಂಬಿಕೊಂಡು ಓದಿನಲ್ಲಿ ತೊಡಗಿಸಲಾಗುತ್ತಿದೆ. ನಿತ್ಯ ಎಲ್ಲಾ ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಪೋಷಕರೂ ಕೂಡ ತಮ್ಮ ಮಕ್ಕಳು ಶಿಕ್ಷಣವನ್ನು ಕಲಿಯಬೇಕೆಂಬ ಹಂಬಲದಿಂದ ತರಗತಿಗೆ ಕಳುಹಿಸುತ್ತಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ ಮೂವರು ಶಿಕ್ಷಕಿಯರನ್ನು ಈ ಲರ್ನಿಂಗ್ ಸೆಂಟರ್‌ಗಳಿಗೆ ನೇಮಕ ಮಾಡಲಾಗಿದೆ. ಅವರೂ ಕೂಡ ಸಂಜೆ ಕೆಲಸ ಮುಗಿಸಿಕೊಂಡು ೫.೩೦ರ ವೇಳಗೆ ಲರ್ನಿಂಗ್ ಸೆಂಟರ್‌ಗೆ ಬಂದು ಮಕ್ಕಳಿಗೆ ಪಠ್ಯ ಬೋಧಿಸುವ ಕಾಯಕದಲ್ಲಿ ನಿರತರಾಗುವರು. ನಿತ್ಯ ಎಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ. ಎಷ್ಟು ಮಂದಿ ಗೈರು ಹಾಜರಾಗಿದ್ದಾರೆ, ಹಾಲು-ಮೊಟ್ಟೆ ನೀಡಿಕೆಯ ಪ್ರತಿದಿನದ ವಿವರವೆಲ್ಲವೂ ಮಲಬಾರ್ ಗ್ರೂಪ್‌ನ ಮೇಲ್ವಿಚಾರಕರಿಗೆ ವ್ಯಾಟ್ಸಾಪ್ ಮೂಲಕ ಶಿಕ್ಷಕಿಯರು ಕಳುಹಿಸುತ್ತಿದ್ದು, ಲರ್ನಿಂಗ್ ಸೆಂಟರ್ ಮಕ್ಕಳಿಗೆ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವಂತೆ ಸಮರ್ಥವಾಗಿ ಮುನ್ನಡೆಸುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.ತಮಿಳು ಕಾಲೋನಿ, ಕಾಳಪ್ಪ ಬಡಾವಣೆಯಲ್ಲಿರುವ ಮೂರು ಲರ್ನಿಂಗ್ ಸೆಂಟರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಲಬಾರ್ ಗ್ರೂಪ್‌ನವರು ಬೀಡಿ ಕಾರ್ಮಿಕ ಕಾಲೋನಿ, ಹಾಲಹಳ್ಳಿ ಸ್ಲಂನಲ್ಲೂ ಲರ್ನಿಂಗ್ ಸೆಂಟರ್ ತೆರೆಯುವ ಚಿಂತನೆಯಲ್ಲಿದ್ದಾರೆ. ಇಂತಹ ಶೈಕ್ಷಣಿಕ ಸೇವೆ ಮುಂದುವರೆಯಲೆಂಬುದು ಸಾರ್ವಜನಿಕರ ಆಶಯವಾಗಿದೆ.
ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಲಬಾರ್ ಗ್ರೂಪ್ ವತಿಯಿಂದ ಲರ್ನಿಂಗ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಕನ್ನಡ ಮಾಧ್ಯಮದ ಮಕ್ಕಳಿಗೆ ಸೀಮಿತವಾಗಿ ಪಠ್ಯ ವಿಷಯಗಳನ್ನು ಕಲಿಸಲಾಗುತ್ತಿದೆ. ಮಕ್ಕಳೂ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ತಮಿಳು ವಾತಾವರಣದಲ್ಲಿರುವ ಮಕ್ಕಳು ಕನ್ನಡ ಕಲಿಯುತ್ತಿರುವುದೂ ಒಳ್ಳೆಯ ಬೆಳವಣಿಗೆ. ಮಕ್ಕಳಿಗೆ ನಿತ್ಯ ಹಾಲು-ಮೊಟ್ಟೆ ನೀಡಲಾಗುತ್ತಿದೆ.- ದಿಲೀಪ್‌ಕುಮಾರ್, ವ್ಯವಸ್ಥಾಪಕರು, ಮಲಬಾರ್ ಗೋಲ್ಡ್ , ಮಂಡ್ಯಲರ್ನಿಂಗ್ ಸೆಂಟರ್‌ನಲ್ಲಿ ನಿತ್ಯ ೪೫ ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಾರೆ. ೧ ರಿಂದ ೯ನೇ ತರಗತಿಯವರೆಗೆ ಮಾತ್ರ ಕನ್ನಡ ಮಾಧ್ಯಮದ ಮಕ್ಕಳಿಗೆ ಪಾಠ ಹೇಳಿಕೊಡಲಾಗುವುದು. ಶಾಲೆಯಲ್ಲಿ ಮಾಡಿದ ಪಾಠಗಳನ್ನೇ ಇಲ್ಲಿ ಪುನರಾವರ್ತನೆ ಮಾಡಲಾಗುತ್ತದೆ. ಮಕ್ಕಳೂ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಮೂರು ಗಂಟೆಗಳ ಕಾಲ ತರಗತಿ ನಡೆಯುತ್ತದೆ.
- ನೇತ್ರಾವತಿ, ಶಿಕ್ಷಕಿ