ಶಿಕ್ಷಣ ವಂಚಿತ ಯುವಕರು ದೇಶಕ್ಕೆ ದೊಡ್ಡ ತಲೆನೋವು-ಎಸ್‌.ಆರ್‌. ಪಾಟೀಲ

| Published : Aug 11 2024, 01:30 AM IST

ಶಿಕ್ಷಣ ವಂಚಿತ ಯುವಕರು ದೇಶಕ್ಕೆ ದೊಡ್ಡ ತಲೆನೋವು-ಎಸ್‌.ಆರ್‌. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸೂಕ್ತ ಶಿಕ್ಷಣ ಪಡೆದುಕೊಂಡಲ್ಲಿ ಯುವಕರು ದೇಶದ ಬಹುದೊಡ್ಡ ಆಸ್ತಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅವರೆಲ್ಲರೂ ಕೈಜೋಡಿಸಲಿದ್ದಾರೆ. ಒಂದು ವೇಳೆ ಶಿಕ್ಷಣ ವಂಚಿತರಾದಲ್ಲಿ ಅದೇ ಯುವಕರು ದೇಶಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಲಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಸೂಕ್ತ ಶಿಕ್ಷಣ ಪಡೆದುಕೊಂಡಲ್ಲಿ ಯುವಕರು ದೇಶದ ಬಹುದೊಡ್ಡ ಆಸ್ತಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅವರೆಲ್ಲರೂ ಕೈಜೋಡಿಸಲಿದ್ದಾರೆ. ಒಂದು ವೇಳೆ ಶಿಕ್ಷಣ ವಂಚಿತರಾದಲ್ಲಿ ಅದೇ ಯುವಕರು ದೇಶಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಲಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಮ್ಮ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುವಕರ ಬುದ್ಧಿವಂತಿಕೆ ಹಾಗೂ ಶ್ರಮ ಕೇವಲ ಅವರ ಕುಟುಂಬಕ್ಕೆ ಸೀಮಿತವಲ್ಲ, ಭವಿಷ್ಯದ ಪ್ರತಿ ಹಂತದಲ್ಲೂ ಯಶಸ್ಸಿನ ಹಾದಿಯಲ್ಲಿ ದೇಶವನ್ನು ಕೊಂಡೊಯ್ಯುಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕರು ಸಮಾನ ಜವಾಬ್ದಾರಿ ಹಾಗೂ ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ ಎಂದರು.

ಇದೊಂದು ಗಂಭೀರ ಚಿಂತನೆ: ವರ್ತಕರ ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಶಿಕ್ಷಣವು ಗುರುಕುಲ ಪದ್ಧತಿಯಿಂದ ಇಂದು ವಿಶ್ವವಿದ್ಯಾಲಯ ಹಂತಕ್ಕೆ ಬಂದು ತಲುಪಿದೆ. ಯುವಶಕ್ತಿಯಿಲ್ಲದೇ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ದುರ್ಬಳಕೆ, ಶ್ರೀಮಂತ ಪಾಲಕರ ಮನಸ್ಥಿತಿಗಳಿಂದಾಗಿ ನಿಗದಿತ ಗುರಿ ತಲುಪದೇ ಅನಗತ್ಯವಾಗಿ ಯುವಶಕ್ತಿ ಪೋಲಾಗುತ್ತಿದೆ. ಅವರಲ್ಲಿ ಗಮನವಿಟ್ಟು ಕಲಿಯುವಂತಹ ಪರಿಸರ ನಿರ್ಮಾಣ ಮಾಡುವುದೇ ದೊಡ್ಡ ಸವಾಲಾಗಿದ್ದು, ಈ ಕುರಿತು ಸರ್ಕಾರ ಸೇರಿದಂತೆ ಪಾಲಕರು ಗಂಭೀರ ಚಿಂತನೆ ಮಾಡಬೇಕಾಗಿದೆ ಎಂದರು.

ಗ್ರಾಮಾಭಿವೃದ್ಧಿ ಕಾರ್ಯ ಶ್ಲಾಘನೀಯ: ನಾಗರಾಜ ಆನ್ವೇರಿ ಮಾತನಾಡಿ, ಶಿಕ್ಷಣ, ಕ್ರೀಡೆ ಯಾವುದೇ ಕ್ಷೇತ್ರವಾಗಲಿ ಯುವಕರು ಬೇಕು, ರಾಷ್ಟ್ರ ನಿರ್ಮಾಣದಲ್ಲಿ ಅವರು ನಿರ್ವಹಿಸಬೇಕಾದ ಪಾತ್ರಗಳ ಕುರಿತು ಅವರಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರು ಸಕ್ರೀಯವಾಗಿ ಭಾಗವಹಿಸಿದಲ್ಲಿ ದೇಶವು ತನ್ನಿಂತಾನೆ ಪ್ರಗತಿ ಪಥದತ್ತ ಸಾಗಲಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿರುವ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 126 ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ತಾಲೂಕಾ ಯೋಜನಾಧಿಕಾರಿ ಜಿ.ರಘುಪತಿ, ರಘು ಮುದಿಗೌಡ್ರ, ಶರೀಫ್ ಜಂಗ್ಲಪ್ಪನವರ, ಹಣಕಾಸು ಪ್ರಬಂಧಕರು, ಫಲಾನುಭವಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಮನ್ವಯಾಧಿಕಾರಿ ಶೀತಲ್ ಬೇಕಲ್ ಸ್ವಾಗತಿಸಿದರು. ಮೇಲ್ವಿಚಾರಕ ಸೈಯದ್ ನಿರೂಪಿಸಿ, ವಂದಿಸಿದರು.