ಸಾರಾಂಶ
Unemployment Allowance under Yuvanidhi Scheme: Tips for Effective Utilization
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಪದವಿ, ಡಿಪ್ಲೋಮಾ 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳ ಅಥವಾ 180 ದಿನ ಮೇಲ್ಪಟ್ಟ ನಿರುದ್ಯೋಗ ಯುವಕ, ಯುವತಿಯರಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ತಿಳಿಸಿದ್ದಾರೆ.ಯುವನಿಧಿ ಯೋಜನಡಿಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ (ಪದವೀಧರರಿಗೆ 3000 ರು. ಗಳ ಹಾಗೂ ಡಿಪ್ಲೋಮಾದವರಿಗೆ 1500 ರು.) ಫಲಾನುಭವಿಗಳ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕಿನ ಉಳಿತಾಯ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ (ಹಣ) ವನ್ನು ಸಂದಾಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ನಾತಕೊತ್ತರ ಪದವಿ ಹಾಗೂ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ಈ ಸೌಲಭ್ಯವು 2 ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗುತ್ತದೆ.ನಿರುದ್ಯೋಗ ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು, ನಿರೂದ್ಯೋಗ ಸ್ಥಿತಿಗತಿ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು. ಈಗಾಗಲೇ ಪ್ರತಿ ತಿಂಗಳು ಡಿಬಿಟಿ ಮುಖಾಂತರ ಹಣ ವರ್ಗಾವಣೆಯಾದ ಫಲಾನುಭವಿಗಳು ಮುಂದಿನ ಡಿಬಿಡಿ ಹಣ ಪಡೆಯಲು ಪ್ರತಿ ತಿಂಗಳು 25ರ ಒಳಗೆ ಕಡ್ಡಾಯ ಸ್ವಯಂ ಘೋಷಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.18005999918 ಅಥವಾ ಜಿಲ್ಲಾ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯಾದಗಿರಿ ಇವರಿಗೆ ದೂ.ಸಂ.08473253718ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.