ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಡತನ ಹಾಗೂ ಜಾತಿ ಅವಮಾನಕ್ಕಿಂತಲೂ ನಿರುದ್ಯೋಗ ಅತ್ಯಂತ ಅಮಾನವೀಯವೆಂದು ನಿವೃತ್ತ ಪ್ರಾಚಾರ್ಯ ಹಾಗೂ ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.

ಕರ್ನಾಟಕ ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತ ಶಿಕ್ಷಕರ ಒಕ್ಕೂಟ ಜಿಲ್ಲಾ ಘಟಕ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ಭಾರತದಲ್ಲಿ ನಿರುದ್ಯೋಗಿಗಳು ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಅಸಮಾನತೆ ವ್ಯವಸ್ಥೆ ಪ್ರಜಾಪ್ರಭುತ್ವದ ಲಕ್ಷಣವಲ್ಲವೆಂದರು.

ನಿವೃತ್ತ ನೌಕರರಿಗೆ ಪಿಂಚಣಿ ಕೊಡುವುದರಲ್ಲಿ ಭಾರತ 52ನೇ ಕಡೆಯ ಸ್ಥಾನದಲ್ಲಿದೆ. ಮೂರ್ಖತನದ ವ್ಯವಸ್ಥೆಗೆ ಒಗ್ಗಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೆ ನಿರುದ್ಯೋಗವಿದೆಯೆಂದು ಒಪ್ಪಿಕೊಂಡಿದ್ದಾರೆ. ಪ್ರತಿ ವರ್ಷ 1 ಕೋಟಿ ಪದವೀಧರರು ವಿಶ್ವವಿದ್ಯಾನಿಲಯಗಳಿಂದ ಹೊರ ಬರುತ್ತಿದ್ದಾರೆ. ನಿರುದ್ಯೋಗ ಯಾವ ದೇಶದಲ್ಲಿರುತ್ತೋ ಆ ದೇಶದಲ್ಲಿ ಬಡತನ, ಆರ್ಥಿಕ ಅಸಮಾನತೆಯಿರುತ್ತದೆ ಎಂದರು.

ಹೆಚ್ಚು ಪದವೀಧರ ನಿರುದ್ಯೋಗಿಗಳನ್ನು ಹೊಂದಿರುವ ದೇಶ ಭಾರತ. ಶಿಕ್ಷಣ ನಾಳಿನ ಬದುಕು ಎನ್ನುವ ನಿಖರತೆಯನ್ನು ಮಕ್ಕಳಿಗೆ ತಿಳಿಸಬೇಕು. ಶಿಕ್ಷಣದ ಜೊತೆ ಕೌಶಲ್ಯ ಶಿಕ್ಷಣವೂ ಒಂದು ಭಾಗವಾಗಬೇಕು. ಇಚ್ಚಿತ ಉದ್ಯೋಗ ಕೈಗೊಳ್ಳುವ ರೀತಿಯ ಶಿಕ್ಷಣ ಬೇಕಾಗಿದೆ. ನಿರುದ್ಯೋಗ ಕೌಟುಂಬಿಕ ಅಶಾಂತಿಗೆ ಕಾರಣವಾಗುತ್ತಿದೆ. ಸರ್ಕಾರಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.


ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್.ಚಂದ್ರಶೇಖರ್ ಮಾತನಾಡಿ, ಉದ್ಯೋಗ ನೀಡುವಲ್ಲಿ ಸರ್ಕಾರ ನುಣುಚಿಕೊಳ್ಳುತ್ತಿರುವುದರಿಂದ ಸಾರ್ವಜನಿಕ ಹೂಡಿಕೆ ಕುಸಿಯುತ್ತಿದೆ. ಹೀಗಾದರೆ ಉದ್ಯೋಗ ಹೇಗೆ ಸೃಷ್ಟಿಯಾಗುತ್ತದೆಎಂದು ಪ್ರಶ್ನಿಸಿದರು.

ನಿರುದ್ಯೋಗಕ್ಕೆ ದೊಡ್ಡ ಸ್ಥರಗಳಿವೆ. ಉನ್ನತ ಪದವಿ ಪಡೆದವರಿಗೂ ಉದ್ಯೋಗ ಸಿಗುವುದಿಲ್ಲ. ಲೇಬರ್ ಮಾರ್ಕೆಟ್ ದೊಡ್ಡ ತಾರತಮ್ಯದಿಂದ ಕೂಡಿರುವ ವ್ಯವಸ್ಥೆ. ನೋಟು ಅಮಾನ್ಯಿಕರಣದಿಂದ ಅಸಂಘಟಿತ ವಲಯ ದೊಡ್ಡ ಆಘಾತ ಅನುಭವಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಮಾಡುವವರು ಅಸಂಘಟಿತ ವಲಯದವರು. ಕೌಶಲ್ಯಕ್ಕು ಉದ್ಯೋಗಕ್ಕೂ ನಡುವೆ ಸಂಬಂಧವೇ ಇಲ್ಲದಂತಾಗಿದೆ. ಸಾಲ ಸೌಲಭ್ಯ, ಸಬ್ಸಿಡಿ, ಕೌಶಲ್ಯ ತರಬೇತಿಗಳನ್ನು ನೀಡುವ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ನಿರ್ಮಿಸುವ ಜವಾಬ್ದಾರಿಯಿಂದ ದೂರವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಂಶುಪಾಲರು ಹಾಗೂ ನಿವೃತ್ತ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ದಿಲ್‍ಷಾದ್ ಉನ್ನಿಸಾ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಬಿ.ಕೆ.ಶಿವರಶ್ಮಿ ಅಕ್ಕ, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಹೆಚ್ಎಸ್ ಟಿ ಸ್ವಾಮಿ ವೇದಿಕೆಯಲ್ಲಿದ್ದರು.