ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಭರತ್ ಎಸ್ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ಮಂಗಳವಾರ ಬೆಳಗ್ಗೆ ಕಚೇರಿ ಸಮಯಕ್ಕೆ ಒಂದು ಗಂಟೆ ಮುನ್ನವೇ ಪಟ್ಟಣಕ್ಕೆ ಆಗಮಿಸಿದ್ದ ಅವರು, ನೇರವಾಗಿ ಪಟ್ಟಣದ ಅಗಸ್ತ್ಯ ತೀರ್ಥಕ್ಕೆ ಹೋಗುವ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿ, ಅಡುಗೆ ಕೋಣೆ, ಶೌಚಾಲಯ ಸೇರಿದಂತೆ ಪ್ರತಿಯೊಂದು ಕೊಠಡಿಗೂ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯ ಕೂಲಂಕುಷ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿದರು.ಹಾಸ್ಟೆಲ್‌ನಲ್ಲಿ ಲಭ್ಯವಾಗುತ್ತಿರುವ ಸೌಲಭ್ಯ, ಕುಡಿಯುವ ನೀರಿನ ಶುದ್ಧತೆ ಹಾಗೂ ಶುಚಿತ್ವದ ಕುರಿತಂತೆ ಮಾಹಿತಿ ಕಲೆ ಹಾಕಿದರು. ನಂತರ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್‌ನಲ್ಲಿ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲಭ್ಯವಾಗುವ ಸೌಲಭ್ಯ ನಿಯಮಾನುಸಾರ ವಿತರಣೆ ಮಾಡಬೇಕು ಎಂದು ಹಾಸ್ಟೆಲ್ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದರು.
ವಿದ್ಯಾರ್ಥಿ ನಿಲಯ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಅಡುಗೆ ಕೋಣೆ ಸದಾ ಸ್ವಚ್ಛವಾಗಿರಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಉತ್ತಮವಾದ ಶುಚಿರುಚಿಯಾದ ಆಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.ನಂತರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯ ವಾರ್ಡಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನರಲ್ಲಿ ವಿಶ್ವಾಸ ಬಲವಾಗುವಂತೆ ಹಾಗೂ ವಿಳಂಬ ಮಾಡದೆ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಮಳೆಗಾಲವಾದ್ದರಿಂದ ಹೆಚ್ಚುತ್ತಿರುವ ಡೆಂಘೀ ಜ್ವರದ ಬಗ್ಗೆ ನಿಗಾ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಯ ಶೌಚಾಲಯ, ಔಷಧ ವಿತರಣ ಕೇಂದ್ರ, ದಾಸ್ತಾನು ಕೊಠಡಿ, ಡಯಾಲಿಸಿಸ್ ವಾರ್ಡ ಹೊರ ರೋಗಿಗಳ ಚಿಕಿತ್ಸಾ ಕೊಠಡಿ ವೀಕ್ಷಿಸಿದರು. ಆಸ್ಪತ್ರೆಯ ಒಳ ಮತ್ತು ಹೊರ ಆವರಣದಲ್ಲಿ ವಾತಾವರಣ ಪರಿಶೀಲಿಸಿ ಸ್ವಚ್ಛತೆಗೆ ಸಂಬಂಧಿಸಿದ ಅಗತ್ಯ ಸಲಹೆ ಸೂಚನೆ ನೀಡಿದರು.ಈ ವೇಳೆ ಲಕ್ಷ್ಮೇಶ್ವರ ತಾಪಂ ಇಓ ಕೃಷ್ಣಪ್ಪ ಧರ್ಮರ, ತಾಲೂಕು ಮಟ್ಟದ ಇತರ ಅಧಿಕಾರಿಗಳು ಇದ್ದರು.