ಡೀಸಿಯಿಂದ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ

| Published : Jan 31 2024, 02:19 AM IST

ಸಾರಾಂಶ

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ಬೆಳಿಗ್ಗೆ ಜಿಲ್ಲೆಯ ತುರುವೇಕೆರೆ, ತಿಪಟೂರು ತಾಲೂಕಿನ ನಾಡಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ಬೆಳಿಗ್ಗೆ ಜಿಲ್ಲೆಯ ತುರುವೇಕೆರೆ, ತಿಪಟೂರು ತಾಲೂಕಿನ ನಾಡಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಮೊದಲಿಗೆ ತುರುವೇಕೆರೆ ತಾಲೂಕು ಮಾಯಸಂದ್ರ ನಾಡ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದರು. ಸಿಬ್ಬಂದಿಗಳ ಹಾಜರಾತಿ ಹಾಗೂ ವಿವಿಧ ಸೌಲಭ್ಯ ಕೋರಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸಿದರು. ಸಾರ್ವಜನಿಕರಿಗಾಗಿ ಒದಗಿಸುವ ಸೌಲಭ್ಯಗಳಿಗೆ ಸಂಬಂಧಿಸಿ ವಿವಿಧ ಕಡತಗಳನ್ನು ಪರಿಶೀಲಿಸಿದ ಅವರು, ಜನವರಿ 3ರಂದು ಸಲ್ಲಿಸಿರುವ ಅರ್ಜಿಗಳನ್ನು ಇನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಿಬ್ಬಂದಿಗಳಿಗೆ ಕಾರಣ ಕೇಳಿದರು. ಜನರ ತೆರಿಗೆ ಹಣವನ್ನು ನಿಮಗೆ ವೇತನವನ್ನಾಗಿ ಪಾವತಿಸಲಾಗುತ್ತಿದೆ. ಜವಾಬ್ದಾರಿಯಿಂದ ಸರ್ಕಾರಿ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕೆಂದು ನಿರ್ದೇಶನ ನೀಡಿದರು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿಂಚಣಿ ಮಂಜೂರಾತಿಗೆ ಸಂಬಂಧಿಸಿದ 122 ಅರ್ಜಿಗಳು ಬಾಕಿ ಇರುವುದನ್ನು ಗಮನಿಸಿದ ಅವರು, ಈ ದಿನವೇ ಎಲ್ಲಾ 122 ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದರಲ್ಲದೆ, ಅನಗತ್ಯ ದಾಖಲೆಗಳನ್ನು ಕೇಳಿ ಅರ್ಜಿದಾರರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು. ಮುಂದಿನ ದಿನಗಳಲ್ಲಿ ಸ್ವೀಕೃತ ಅರ್ಜಿಗಳನ್ನು 4 ದಿನಗಳೊಳಗೆ ವಿಲೇವಾರಿ ಮಾಡದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಶೋಕಾಸ್ ನೋಟೀಸ್ ನೀಡಲಾಗುವುದೆಂದು ಎಚ್ಚರಿಕೆ ನೀಡಿದರು.

ನಂತರ ತುರುವೇಕೆರೆ ತಾಲೂಕು ಕಚೇರಿಗೆ ಭೇಟಿ ನೀಡಿ ಅಭಿಲೇಖಾಲಯ, ಆಹಾರ ಶಾಖೆ, ಚುನಾವಣಾ ಶಾಖೆ, ಭೂ ದಾಖಲೆಗಳ ಶಾಖೆಯನ್ನು ಪರಿಶೀಲಿಸುತ್ತಾ, ಸರ್ಕಾರಿ ಅಧಿಕಾರಿಗಳು ಜನ ಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ನೀಡುವ ಮೂಲಕ ಇಲಾಖೆಗೆ ಉತ್ತಮ ಹೆಸರು ತರಬೇಕು. ಒಂದೇ ಸ್ಥಳದಲ್ಲಿ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಂದ ಕರ್ತವ್ಯ ನಿರ್ಲಕ್ಷತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ದೀರ್ಘಾವಧಿಯಿಂದ ಒಂದೇ ಕಡೆ ಕೆಲಸ ಮಾಡುವವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ತಹಸೀಲ್ದಾರ್ ರೇಣುಕುಮಾರ್ ಅವರಿಗೆ ಸ್ಥಳದಲ್ಲಿಯೇ ಆದೇಶಿಸಿದರು.

ಅರ್ಜಿ ವಿಲೇವಾರಿ ಮಾಡದ ನೌಕರರ ಬಗ್ಗೆ ಸಾರ್ವಜನಿಕರಿಂದ ಪ್ರತಿ ದಿನ ದೂರುಗಳು ಬರುತ್ತಲೇ ಇವೆ. ಮತ್ತೊಮ್ಮೆ ದೂರು ಬಂದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೆ, ಅನ್ನಭಾಗ್ಯ ಯೋಜನೆಯಡಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ದೇಶನ ನೀಡಿದರು.

ಭೂ ದಾಖಲೆಗಳ ಶಾಖೆಯಲ್ಲಿ ಬಾಕಿಯಿರುವ ಆರ್‌ಆರ್‌ಟಿ, ಪೋಡಿ, ಮೋಜಣಿ ಬಾಕಿ ಅರ್ಜಿಗಳಿಗೆ ಸಂಬಂಧಿಸಿದಂತೆ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರ್ ಅವರಿಂದ ಮಾಹಿತಿ ಪಡೆದ ಅವರು, ಗ್ರಾಮಲೆಕ್ಕಾಧಿಕಾರಿವಾರು ಬಾಕಿಯಿರುವ ಅರ್ಜಿಗಳ ಮಾಹಿತಿ ಒದಗಿಸಬೇಕೆಂದು ಸೂಚನೆ ನೀಡಿದರು.

ಕಚೇರಿ ಕೊಠಡಿಗಳನ್ನು ಪರಿಶೀಲಿಸಿ, ಕೊಠಡಿಗಳನ್ನು ತಮ್ಮ ಮನೆಯಂತೆಯೇ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರಲ್ಲದೆ ಕಂದಾಯ ಸಚಿವರು ಎಲ್ಲಾ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಬಾಕಿ ಇರುವ ಭೂಮಿ ಪೆಂಡೆನ್ಸಿಯನ್ನು ಹಾಗೂ ಚುನಾವಣೆ ಶಾಖೆಯಲ್ಲಿ ಬಾಕಿ ಇರುವ ನಮೂನೆ 6, 7, 8ರಡಿ ಸ್ವೀಕೃತ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಸೂಚಿಸಿದರು.

ಜಿಲ್ಲಾಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಸರ್ಕಾರಿ ಸೌಲಭ್ಯಕ್ಕಾಗಿ ಸಾರ್ವಜನಿಕರಿಂದ ಸ್ವೀಕೃತ ಅರ್ಜಿಗಳ ವಿಲೇವಾರಿ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕರ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗಬೇಕೆಂಬ ಉದ್ದೇಶದಿಂದ ಈ ತರಹದ ಭೇಟಿ ನೀಡಲಾಗುತ್ತಿದೆ ಎಂದರು.

ತುರುವೇಕೆರೆ ತಾಲೂಕು ಕೊಂಡಜ್ಜಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳು ಅದೇ ಗ್ರಾಮದ ರೈತ ಬಸವಲಿಂಗಯ್ಯನವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯನ್ನು ಸೆರೆ ಹಿಡಿಯಲು ಇಟ್ಟಿದ್ದ ಬೋನಿಗೆ ಪ್ರತಿ ನಿತ್ಯ ರಾತ್ರಿ ಆಹಾರ ಇಡಬೇಕು. ಆಹಾರವನ್ನರಸಿ ಬರುವ ಚಿರತೆ ಬೋನಿನಲ್ಲಿ ಸೆರೆಯಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ಅವರಿಗೆ ನಿರ್ದೇಶನ ನೀಡಿ, ಸಂಜೆ ವೇಳೆ ಈ ಪ್ರದೇಶದಲ್ಲಿ ಒಂಟಿಯಾಗಿ ತಿರುಗಾಡಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಬಳಿಕ ತುರುವೇಕೆರೆ ತಾಪಂ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲೂಕು ಮಟ್ಟದ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಸರ್ಕಾರಿ ಸೌಲಭ್ಯಗಳಿಗಾಗಿ ಸ್ವೀಕೃತ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ವಿಲೇವಾರಿ ಮಾಡದೆ ನೆಪ ಹೇಳುವ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ತಿಪಟೂರು ತಾಲೂಕು ನೊಣವಿನಕೆರೆ ನಾಡ ಕಚೇರಿಗೆ ಭೇಟಿ ನೀಡಿ, ನಿಗಧಿತ ಶುಲ್ಕ ಮಾತ್ರ ಪಡೆದು ಜಾತಿ,ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಸಪ್ತಶ್ರೀ, ಮತ್ತಿತರರು ಉಪಸ್ಥಿತರಿದ್ದರು.

--------