ಕೈಗೂಡದ ರಸ್ತೆ ಅಗಲೀಕರಣದ ಕನಸು

| Published : Nov 15 2025, 02:30 AM IST

ಸಾರಾಂಶ

ಪಕ್ಕದಲ್ಲಿ ತುಂಗಭದ್ರಾ ನದಿ ಹರಿಯುತ್ತಿರುವ ಹಿನ್ನೆಲೆಯಲ್ಲಿ 3ರಿಂದ 4 ಸಾವಿರ ಎಕರೆ ನೀರಾವರಿ ಪ್ರದೇಶವಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದಲ್ಲಿನ ಮಾಗಳ-ಬೆಟ್ಟದ ಮಲ್ಲಪ್ಪ ರಾಜ್ಯ ಹೆದ್ದಾರಿ ಅಗಲೀಕರಣದ ಕನಸು ಕಳೆದ 20 ವರ್ಷಗಳಿಂದ ಕೈಗೂಡುತ್ತಿಲ್ಲ. ದಿನದಿಂದ ದಿನಕ್ಕೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವವರು ರೋಸಿ ಹೋಗಿದ್ದಾರೆ.

ಹೌದು, ತಾಲೂಕಿನ ಮಾಗಳ ಗ್ರಾಮದ ವಿಜಯನಗರ ಜಿಲ್ಲೆಯಲ್ಲಿ 2ನೇ ಅತಿದೊಡ್ಡ ಕಂದಾಯ ಗ್ರಾಮ. 10 ಸಾವಿರ ಎಕರೆಗೂ ಹೆಚ್ಚು ಸಾಗುವಳಿ ಭೂಮಿ ಇದೆ. ಪಕ್ಕದಲ್ಲಿ ತುಂಗಭದ್ರಾ ನದಿ ಹರಿಯುತ್ತಿರುವ ಹಿನ್ನೆಲೆಯಲ್ಲಿ 3ರಿಂದ 4 ಸಾವಿರ ಎಕರೆ ನೀರಾವರಿ ಪ್ರದೇಶವಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಕೆಲವು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ.

ಇಲ್ಲಿನ ನೀರಾವರಿ ಪ್ರದೇಶದ ಜಮೀನುಗಳ ಉಳುಮೆಗೆ ಟ್ರ್ಯಾಕ್ಟರ್‌ ಬಳಕೆ ಹೆಚ್ಚಿದೆ. ಇಡೀ ತಾಲೂಕಿನಲ್ಲೇ ಅತಿಹೆಚ್ಚು ಟ್ರ್ಯಾಕ್ಟರ್‌ ಹೊಂದಿರುವ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದೆ. ಬೈಕ್‌ಗಳ ಸಂಖ್ಯೆ ವಿಪರೀತ ಹೆಚ್ಚಿದೆ. ರೈತರು ಕೃಷಿ ಚಟುವಟಿಕೆಗೆ ಬೈಕ್‌ನ್ನು ಹೆಚ್ಚು ಅವಲಂಬಿಸಿದ್ದಾರೆ. ಹೆಸರಿಗೆ ಮಾಗಳ- ಬೆಟ್ಟದ ಮಲ್ಲಪ್ಪ ರಾಜ್ಯ ಹೆದ್ದಾರಿ, ಆದರೆ ಕಿರಿದಾದ ರಸ್ತೆ. ಅಂಗೈ ಅಗಲ ಡಾಂಬಾರು ಕೂಡ ಕಾಣುತ್ತಿಲ್ಲ. ಎಲ್ಲ ಕಡೆಗೂ ಕುಡಿಯುವ ನೀರಿನ ಪೈಪ್‌ಲೈನ್‌, ಮನೆಗಳಿಗೆ ನಳಗಳ ಪೈಪ್‌ಲೈನ್‌ ಹೀಗೆ... ಒಂದಲ್ಲ ಒಂದು ಕಾರಣಕ್ಕೆ ರಸ್ತೆ ಅಗೆದು ಸಂಪೂರ್ಣ ಹಾಳು ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಹಾದು ಹೋಗಿರುವ 1 ಕಿಮೀ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ.

ರಸ್ತೆ ಬದಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆ ಬಳಕೆಯ ನೀರು ರಸ್ತೆ ಗುಂಡಿಯಲ್ಲಿ ಸಂಗ್ರಹವಾಗುತ್ತಿದೆ. ವಾಹನಗಳ ಓಡಾಟದಿಂದ ರಸ್ತೆಯಲ್ಲಿನ ಕೆಸರು ನೀರು ಜನರ ಮೈಗೆಲ್ಲ ಸಿಡಿದು, ಎಷ್ಟೋ ಜನ ರಾಡಿ ಬಟ್ಟೆಯಲ್ಲೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಹೋಗಿರುವ ಉದಾಹರಣೆಗಳಿವೆ.

ಭತ್ತ ಹಾಗೂ ಮೆಕ್ಕೆಜೋಳ ಕಟಾವಿನ ಯಂತ್ರಗಳ ಲಾರಿ, ಟ್ರ್ಯಾಕ್ಟರ್‌ ಸೇರಿದಂತೆ ಭತ್ತ ತುಂಬಿಕೊಂಡು ಹೋಗುವ ಲಾರಿಗಳು ಹೀಗೆ ರಸ್ತೆಯಂತೂ ಸಿಕ್ಕಾಪಟ್ಟೆ ಬ್ಯೂಸಿ, ತಗ್ಗು-ಗುಂಡಿಗಳ ನಡುವೆ ಸರ್ಕಸ್ ಮಾಡುತ್ತಾ ಸಾಗಬೇಕಿದೆ.

ಈ ರಸ್ತೆಯ ಇಕ್ಕೆಲಗಳಲ್ಲಿ ಸಾಕಷ್ಟು ಒತ್ತುವರಿಯಾಗಿದೆ. ಈ ಹಿಂದೆ ಶಾಸಕರು ಗ್ರಾಮ ಭೇಟಿ ಸಂದರ್ಭದಲ್ಲಿ ಸಾಕಷ್ಟು ದೂರುಗಳಿದ್ದವು. ತಾಪಂ ಸಾಮಾನ್ಯ ಸಭೆಯಲ್ಲಿ ಶಾಸಕ ಕೃಷ್ಣನಾಯ್ಕ ಎಲ್ಲ ಪಿಡಿಒಗಳ ಮೇಲೆ ಗರಂ ಆಗಿದ್ದರು. ಮುಂದಿನ ವಾರದೊಳಗೆ ರಸ್ತೆ ಒತ್ತುವರಿ ಮಾಡಿರುವ ಮನೆ ಮುಂದಿನ, ಕಟ್ಟೆ-ಕಲ್ಲುಗಳನ್ನು ತೆರವುಗೊಳಿಸಲು ನೋಟಿಸ್‌ ನೀಡಿ, ತೆರವು ಮಾಡಬೇಕೆಂದು ನಿರ್ದೇಶನ ನೀಡಿದ್ದರು. ಆದರೆ ಸಭೆ ಮುಗಿದ 15 ದಿನ ಕಳೆದರೂ ಯಾವೊಬ್ಬ ಪಿಡಿಒ ನೋಟಿಸ್‌ ನೀಡಿ, ತೆರವಿಗೆ ಮುಂದಾಗಿಲ್ಲ.

ಮಾಗಳ-ಬೆಟ್ಟದ ಮಲ್ಲಪ್ಪ ರಸ್ತೆ ಅಗಲೀಕರಣ ಹಾಗೂ ಎರಡು ಕಡೆ, ವಿದ್ಯುತ್‌ ಕಂಬಗಳ ಅಳವಡಿಸುವ ಕಾಮಗಾರಿಗೆ ₹1 ಕೋಟಿ ಕ್ರಿಯಾ ಯೋಜನೆಯನ್ನು ಶಾಸಕ ಕೃಷ್ಣನಾಯ್ಕ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿದ್ದು, ಮಂಜೂರಾತಿಗೆ ಎದುರು ನೋಡುತ್ತಿದ್ದಾರೆ.

ಗ್ರಾಮದ ರಸ್ತೆ ಬಹಳ ಕಿರಿದಾಗಿದೆ. ಎರಡು ಕಡೆಗೂ ಚರಂಡಿ ವ್ಯವಸ್ಥೆ ಇಲ್ಲ. ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದರೂ ಲೋಕೋಪಯೋಗಿ ಇಲಾಖೆಯಿಂದ ಬೊಗಸೆ ಮಣ್ಣು ಹಾಕಿಲ್ಲ. ವಾಹನಗಳು ನಿತ್ಯ ಸರ್ಕಸ್‌ ಮಾಡುತ್ತಾ ಓಡಾಡಬೇಕಾದ ಸ್ಥಿತಿ ಇದೆ. ಶಾಸಕರು ಆದಷ್ಟು ಬೇಗ ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿ ಪಡಿಸಲಿ ಎನ್ನುತ್ತಾರೆ ಗ್ರಾಮಸ್ಥರು.

ಮಾಗಳ-ಬೆಟ್ಟದ ಮಲ್ಲಪ್ಪ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ, ವಿದ್ಯುತ್‌ ಕಂಬಗಳ ಅಳವಡಿಸುವ ಕಾಮಗಾರಿಗೆ ಅನುದಾನ ಬಂದಿದೆ. ಟೆಂಡರ್‌ ಪ್ರಕ್ರಿಯೆ ಬಾಕಿ ಇದೆ ಎನ್ನುತ್ತಾರೆ ಹೂವಿನಹಡಗಲಿ ಲೋಕೋಪಯೋಗಿ ಇಲಾಖೆ ಬಿ.ರಾಜಪ್ಪ ಎಇಇ.